ಶಿವಮೊಗ್ಗ: ಕಾನೂನು ಪಾಲನೆಯ ಜೊತೆಗೆ ಜನಸ್ನೇಹಿ ಆಡಳಿತ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮಹಾಬಲೇಶ್ವರ ನಾಯಕ್ ಎಸ್.ಎಲ್. ಅವರಿಗೆ ಇತ್ತೀಚೆಗೆ ಇಲಾಖೆ ಹಾಗೂ ಸಾರ್ವಜನಿಕರ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾ ಮತ್ತು ವಿಸಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ವೃತ್ತ ನಿರೀಕ್ಷಕರಾದ (ಸಿಪಿಐ) ಸಂತೋಷ್ ಅವರು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಮಹಾಬಲೇಶ್ವರ ನಾಯಕ್ ಅವರ ಸುದೀರ್ಘ ಹಾಗೂ ದಕ್ಷ ಸೇವೆಯನ್ನು ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.

ಓದುಗ, ಪುಸ್ತಕ ಪ್ರೇಮಿ ಹಾಗೂ ಜನಸ್ನೇಹಿ ಅಧಿಕಾರಿ
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖರಾದ ಐ.ವಿ. ಹೆಗಡೆ ಅವರು, “ಮಹಾಬಲೇಶ್ವರ ನಾಯಕ್ ಅವರು ತಮ್ಮ ವೃತ್ತಿಜೀವನದ ಯಶಸ್ವಿ ಎರಡನೇ ಇನ್ನಿಂಗ್ಸ್ ಮುಗಿಸಿದ್ದಾರೆ. ಅವರು ಕೇವಲ ಅಧಿಕಾರಿಯಾಗಿರದೆ, ಅಪಾರ ಅಧ್ಯಯನ ಶೀಲರು ಹಾಗೂ ತೀವ್ರ ಪುಸ್ತಕ ಪ್ರೀತಿಯುಳ್ಳವರಾಗಿದ್ದಾರೆ. ಸಾಗರ ನಗರ (ಪೇಟೆ) ಠಾಣೆ ಹಾಗೂ ಗ್ರಾಮಾಂತರ ಠಾಣೆ ಸೇರಿದಂತೆ ಎರಡು ಅವಧಿಗೆ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿರುವ ಅವರು, ಸದಾ ಜನಸ್ನೇಹಿಯಾಗಿ ಗುರುತಿಸಿಕೊಂಡವರು. ಅವರ ನಿವೃತ್ತ ಜೀವನವು ಸುಖಮಯವಾಗಿರಲಿ” ಎಂದು ಹಾರೈಸಿದರು.
ಕೊರೋನಾ ಕಾಲದ ದಕ್ಷತೆ ಹಾಗೂ ಕೋಮು ಸೌಹಾರ್ದತೆ
ಮತ್ತೊಬ್ಬ ಪ್ರಮುಖರಾದ ರಾಜಶೇಖರ ಗಾಳಿಪುರ ಮಾತನಾಡಿ, “ವಿಶ್ವವೇ ತಲ್ಲಣಗೊಂಡಿದ್ದ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಹಾಬಲೇಶ್ವರ ನಾಯಕ್ ಅವರು ನಿರ್ವಹಿಸಿದ ಕರ್ತವ್ಯ ಅತ್ಯಂತ ಶ್ಲಾಘನೀಯ. ಪ್ರಸಿದ್ಧ ಹುಣಸೂರು ಮಾರಿ ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅತ್ಯಂತ ಚತುರತೆಯಿಂದ ಬಂದೋಬಸ್ತ್ ನಿರ್ವಹಿಸಿದ್ದರು. ಮಾನವೀಯ ಮೌಲ್ಯಗಳು ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಾ, ಜನರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅವರ ಮುಂದಿನ ಜೀವನ ಸುಖಕರವಾಗಿರಲಿ” ಎಂದರು.

ಕಾಂಗ್ರೆಸ್ ಮುಖಂಡರಾದ ಕಲಸೆ ಚಂದ್ರಪ್ಪ ಮಾತನಾಡಿ, “ಪೊಲೀಸ್ ಇಲಾಖೆಯಲ್ಲಿದ್ದರೂ ಮಹಾಬಲೇಶ್ವರ ನಾಯಕ್ ಅವರು ಸಾರ್ವಜನಿಕರೊಂದಿಗೆ ಸದಾ ಸ್ನೇಹಪೂರ್ವಕವಾಗಿ ನಡೆದುಕೊಳ್ಳುತ್ತಿದ್ದರು. ನೊಂದ ಜನರಿಗೆ ಸೂಕ್ತ ನ್ಯಾಯ ಕೊಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು” ಎಂದು ನೆನೆದರು.
ತಾಳ್ಮೆ ಮತ್ತು ಸಹನೆಯ ಸಹಕಾರ ಮೂರ್ತಿ
ನಿವೃತ್ತ ಎಎಸ್‌ಐ ಪಡಿಯಪ್ಪ ಅವರು ತಮ್ಮ ಒಡನಾಟವನ್ನು ನೆನೆದು, “2011ರಿಂದ ಸೊರಬದಲ್ಲಿ ಇವರ ಜೊತೆ ನಾಲ್ಕು ವರ್ಷ ಕರ್ತವ್ಯ ನಿರ್ವಹಿಸಿದ್ದೇನೆ. ಮಹಾಬಲೇಶ್ವರ ನಾಯಕ್ ಅವರು ಸದಾ ಹಸನ್ಮುಖಿ. ಸಿಬ್ಬಂದಿಯಾಗಲಿ, ಸಾರ್ವಜನಿಕರಾಗಲಿ ಯಾರೊಬ್ಬರಿಗೂ ಕೀಳು ಮಟ್ಟದ ಪದ ಬಳಸಿ ಮಾತನಾಡಿದವರಲ್ಲ. ತಾಳ್ಮೆ ಮತ್ತು ಸಹನೆಯ ಸಹಕಾರ ಮೂರ್ತಿಯಾಗಿದ್ದ ಅವರು ನಿಜವಾದ ಜನಸ್ನೇಹಿ ಪೊಲೀಸ್” ಎಂದು ಗುಣಗಾನ ಮಾಡಿದರು.

ಚಿಕ್ಕಮಗಳೂರು, ಉಡುಪಿ, ಮಂಗಳೂರು, ಹಾವೇರಿ, ಬೆಳಗಾವಿ ಹಾಗೂ ಭಟ್ಕಳ ಗ್ರಾಮಾಂತರ ಪ್ರದೇಶಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಸಾರ್ವಜನಿಕರ ಪ್ರಶಂಸೆಗೆ ಮಹಾಬಲೇಶ್ವರ ನಾಯಕ್ ಅವರು ಪಾತ್ರರಾಗಿದ್ದಾರೆ.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು:
ಈ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಡಾ. ಬೆನಕ ಪ್ರಸಾದ್, ಉಮಾ ಮಹಾಬಲೇಶ್ವರ, ಆನಂದಪುರ ಪಿಎಸ್‌ಐ ಪ್ರವೀಣ್, ಸಾಗರ ಪೇಟೆ ಠಾಣೆಯ ಪಿಎಸ್‌ಐ ಶಾಂತರಾಜು, ಪ್ರೊಬೇಷನರಿ ಪಿಎಸ್‌ಐಗಳಾದ ದೇವರಾಜ್ ಹಾಗೂ ನವೀನ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದು, ನಿವೃತ್ತ ಅಧಿಕಾರಿಗೆ ಶುಭ ಹಾರೈಸಿದರು.








