ನವದೆಹಲಿ: ದಕ್ಷಿಣ ದೆಹಲಿಯ ಸಾಕೇತ್ ಮೆಟ್ರೋ ನಿಲ್ದಾಣದ ಬಳಿ ಶನಿವಾರ ಸಂಜೆ ಸಂಭವಿಸಿದ ಐದು ಅಂತಸ್ತಿನ ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯವು ಇನ್ನೂ ಮುಂದುವರಿದಿದೆ. ಇದುವರೆಗೆ 10ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಸಿದು ಬಿದ್ದ ಈ ಕಟ್ಟಡದಲ್ಲಿ ಕೋಚಿಂಗ್ ಇನ್‌ಸ್ಟಿಟ್ಯೂಟ್, ಕೆಫೆಗಳು ಮತ್ತು ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಘಟನೆ ನಡೆದ ಸಮಯದಲ್ಲಿ ಕಟ್ಟಡದ ಮೇಲಿನ ಮಹಡಿಯಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು ಎಂದು ವರದಿಯಾಗಿದೆ. ಕಟ್ಟಡವು ಸಂಪೂರ್ಣವಾಗಿ ಧ್ವಂಸಗೊಂಡು ಅವಶೇಷಗಳು ಪಕ್ಕದಲ್ಲಿದ್ದ ಟಿನ್ ಶೇಡ್ ಕ್ಯಾಂಟೀನ್ ಮೇಲೆ ಬಿದ್ದಿವೆ. ಈ ಕ್ಯಾಂಟೀನ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿತ್ತು.
ಅವಶೇಷಗಳಡಿ ಸಿಲುಕಿರುವವರನ್ನು ಹುಡುಕಲು ರಕ್ಷಣಾ ತಂಡಗಳು ಭಾರಿ ಯಂತ್ರೋಪಕರಣಗಳು, ಹೈಡ್ರಾಲಿಕ್ ಕಟರ್‌ಗಳು, ಸಂತ್ರಸ್ತರನ್ನು ಪತ್ತೆ ಹಚ್ಚುವ ಕ್ಯಾಮೆರಾಗಳು ಮತ್ತು ಶ್ವಾನ ದಳವನ್ನು ಬಳಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು.
ಪ್ರಕರಣ ದಾಖಲು: “ರಕ್ಷಣಾ ತಂಡಗಳು ನಿನ್ನೆ ರಾತ್ರಿಯಿಂದಲೇ ನಿರಂತರವಾಗಿ ಕಾರ್ಯಾಚರಣೆಯಲ್ಲಿ ತೊಡಗಿವೆ. ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ತಕ್ಷಣವೇ ಕ್ರಮ ಕೈಗೊಳ್ಳಲಾಗಿದ್ದು, ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ,” ಎಂದು ಮುಖ್ಯಮಂತ್ರಿಗಳ ಕಚೇರಿ (CMO) ಸಾಮಾಜಿಕ ಜಾಲತಾಣ ‘X’ನಲ್ಲಿ ತಿಳಿಸಿದೆ.
ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಯವರ (DM) ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ.








