ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ( Mysore Dasara 2022 ) ಗೆ ತೆರಳುವಂತ ಹೊರ ರಾಜ್ಯದ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ವಾಹನ ತೆರಿಗೆಯಿಂದ ವಿನಾಯ್ತಿಯನ್ನು ಘೋಷಣೆ ಮಾಡಿದೆ.
ಈ ಕುರಿತಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರ ಹಿತದೃಷ್ಠಿಯಿಂದ, ಕರ್ನಾಟಕ ಹೊರತುಪಡಿಸಿ, ಇತರೆ ರಾಜ್ಯಗಳಲ್ಲಿ ನೋಂದಾಯಿಸಲ್ಪಟ್ಟ ಮತ್ತು ಆ ರಾಜ್ಯದಲ್ಲಿ ತೆರಿಗೆ ಪಾವತಿಸಿರುವ ವಾಹನಗಳಿಗೆ ತೆರಿಗೆ ಪಾವತಿಯಿಂದ ವಿನಾಯ್ತಿ ನೀಡಲು ಸರ್ಕಾರವು ತೀರ್ಮಾನಿಸಿದೆ ಎಂದಿದ್ದಾರೆ.
ಸರ್ಕಾರದ ತೀರ್ಮಾನದಂತೆ ವಿಶೇಷ ರಹದಾರಿ ಪಡೆದು ದಿನಾಂಕ 29-09-2022ರಿಂದ ದಿನಾಂಕ 06-10-2022ರ ( 2 ದಿನಗಳು ಸೇರಿದಂತೆ) ನಡೆಯಲಿರುವ ದಸರಾ ಮಹೋತ್ಸವಕ್ಕೆ ಅಂತರ ರಾಜ್ಯದಿಂದ ಮೈಸೂರು ನಗರಕ್ಕೆ ಹಾಗೂ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ವ್ಯಾಪ್ತಿಯ ಕೃಷ್ಣರಾಜ್ಯ ಸಾಗರ ಜಲಾಶಯ ವೀಕ್ಷಿಸಲು ಆಗಮಿಸುವ ಪ್ರವಾಸಿ ವಾಹನಗಳಿಗೆ ಮಾತ್ರ ಅನ್ವಯಿಸುವಂತೆ ತೆರಿಗೆ ಪಾವತಿಯಿಂದ ವಿನಾಯ್ತಿ ನೀಡಿ ಆದೇಶಿಸಿದ್ದಾರೆ.