ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಕಡಿಮೆಯಾಗುತ್ತಿರುವ ಬೆನ್ನಲ್ಲೇ, ವಿಶ್ವದ ಅತಿ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾದ ‘ಹಾರ್ಮುಜ್ ಜಲಸಂಧಿ’ (Strait of Hormuz) ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ತಿಳಿಸಿದ್ದಾರೆ.
ಕದನ ವಿರಾಮದ ಅವಧಿಯು ಮುಂದುವರಿಯುವವರೆಗೆ ಎಲ್ಲಾ ವಾಣಿಜ್ಯ ನೌಕೆಗಳಿಗೆ ಯಾವುದೇ ಅಡೆತಡೆಯಿಲ್ಲದೆ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಇರಾನ್ ಭರವಸೆ ನೀಡಿದೆ.
ಜಾಗತಿಕ ತೈಲ ಪೂರೈಕೆಯ ಶೇ. 20 ರಷ್ಟು ಭಾಗ ಈ ಜಲಸಂಧಿಯ ಮೂಲಕವೇ ಸಾಗುವುದರಿಂದ, ಇರಾನ್‌ನ ಈ ನಿರ್ಧಾರವು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಸ್ಥಿರವಾಗಿರಲು ಮತ್ತು ಸರಕು ಸಾಗಣೆ ಸುಗಮವಾಗಲು ನೆರವಾಗಲಿದೆ.
ಪ್ರಾದೇಶಿಕ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇರಾನ್ ಈ ಕ್ರಮ ಕೈಗೊಂಡಿದೆ ಎಂದು ಅರಾಗ್ಚಿ ವಿವರಿಸಿದ್ದಾರೆ.
ಪರ್ಷಿಯನ್ ಗಲ್ಫ್ ಮತ್ತು ಓಮನ್ ಕೊಲ್ಲಿಯನ್ನು ಸಂಪರ್ಕಿಸುವ ಈ ಕಿರು ಜಲಸಂಧಿಯು ಸೌದಿ ಅರೇಬಿಯಾ, ಇರಾಕ್, ಕುವೈತ್ ಮತ್ತು ಯುಎಇ ರಾಷ್ಟ್ರಗಳ ತೈಲ ರಫ್ತಿಗೆ ಜೀವನಾಡಿಯಾಗಿದೆ. ಈ ಹಿಂದೆ ಯುದ್ಧದ ಭೀತಿಯಿಂದಾಗಿ ಇಲ್ಲಿ ಸಂಚಾರಕ್ಕೆ ಅಡ್ಡಿಯಾಗಬಹುದು ಎಂಬ ಆತಂಕ ಜಾಗತಿಕ ಮಟ್ಟದಲ್ಲಿ ಮನೆಮಾಡಿತ್ತು.








