ಶಿವಮೊಗ್ಗ: ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿ ಸಾಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ.) ಕುರಿತು ಪ್ರಕಟವಾದ “ಕೋಟಿ ಬೆಲೆಯ ಕಲ್ಲುಗಳು ಮಾಯ ಹಾಗೂ ಗೋದಾಮುಗಳ ದುರ್ಬಳಕೆ” ಎಂಬ ವರದಿಯನ್ನು ಎ.ಪಿ.ಎಂ.ಸಿ. ಆಡಳಿತ ಮಂಡಳಿ ಸಂಪೂರ್ಣವಾಗಿ ನಿರಾಕರಿಸಿದೆ. ಅಲ್ಲದೇ ಕೋಟಿ ಕೋಟಿ ಬೆಲೆಯ ಕಲ್ಲುಗಳು ನಾಪತ್ತೆಯಗಾಲ್ಲ, ಗೋದಾಮೂ ಹಾಳಾಗಿಲ್ಲ ಎಂಬುದಾಗಿ ಸಾಗರ ಎಪಿಎಂಸಿ ಕಾರ್ಯದರ್ಶಿ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿರುವಂತ ಸಾಗರ ಎ.ಪಿ.ಎಂ.ಸಿ. ಕಾರ್ಯದರ್ಶಿ ಶೈಲಜಾ ಅವರು ಲಿಖಿತ ಪತ್ರದ ಮೂಲಕ ಅಂಕಿ-ಅಂಶ ಸಹಿತ ಸುದೀರ್ಘ ಸ್ಪಷ್ಟೀಕರಣ ನೀಡಿದ್ದಾರೆ. ಪತ್ರಿಕೆಯಲ್ಲಿ ಪ್ರಕಟವಾದ ಅಂಶಗಳು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುವಂತಿದ್ದು, ವಾಸ್ತವ ಬೇರೆಯೇ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾಂಪೌಂಡ್ ಕಲ್ಲುಗಳ ನಾಪತ್ತೆ ಆರೋಪಕ್ಕೆ ಸ್ಪಷ್ಟನೆ
ಪ್ರಾಂಗಣದ ಸುತ್ತಲಿನ ಶಿಥಿಲಗೊಂಡ ಕಾಂಪೌಂಡ್ ಗೋಡೆಯನ್ನು ಕೆಡವಿ ಹೊಸ ಗೋಡೆ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಹಳೆಯ ಕಾಂಪೌಂಡ್‌ನಿಂದ ಬಂದ ನೂರಾರು ಲೋಡ್ ಸೈಜ್ ಕಲ್ಲುಗಳನ್ನು ಗುತ್ತಿಗೆದಾರರು ರಾತ್ರೋರಾತ್ರಿ ಅಕ್ರಮವಾಗಿ ಸಾಗಿಸಿದ್ದಾರೆ ಎಂಬ ಆರೋಪ ಸುಳ್ಳಾಗಿದೆ. ಈ ಹಳೆಯ ಕಲ್ಲುಗಳನ್ನು ಪ್ರಾಂಗಣದ ಒಳಗಿರುವ ಸುಮಾರು 1 ಎಕರೆ ವಿಸ್ತೀರ್ಣದ ಖಾಲಿ ಜಾಗದಲ್ಲಿ ಸುರಕ್ಷಿತವಾಗಿ ಶೇಖರಿಸಿಡಲಾಗಿದೆ. ಕಾಂಪೌಂಡ್ ಗೋಡೆ ನಿರ್ಮಾಣ ಕಾರ್ಯ ಸಂಪೂರ್ಣ ಮುಗಿದ ನಂತರ, ಈ ಎಲ್ಲಾ ಹಳೆಯ ಸೈಜ್ ಕಲ್ಲುಗಳನ್ನು ನಿಯಮಾನುಸಾರ ಟೆಂಡರ್-ಕಂ-ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೃಹತ್ ಗೋದಾಮು ಹಾಳು ಬಿದ್ದಿಲ್ಲ; ಬಳಕೆ ಆಗುತ್ತಿದೆ
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬೃಹತ್ ಗೋದಾಮು ಬಳಕೆಯಾಗದೆ ಹಾಳು ಸುರಿಯುತ್ತಿದೆ ಎಂಬ ಆರೋಪವನ್ನು ಸಮಿತಿ ತಳ್ಳಿಹಾಕಿದೆ. ಸದರಿ ಬೃಹತ್ ಗೋದಾಮಿನಲ್ಲಿ ಒಟ್ಟು ನಾಲ್ಕು ವಿಭಾಗಗಳನ್ನು ಮಾಡಲಾಗಿದ್ದು, ಅದರಲ್ಲಿ ಈಗಾಗಲೇ ಮೂರು ವಿಭಾಗಗಳನ್ನು ಬಾಡಿಗೆಗೆ ನೀಡಲಾಗಿದೆ ಮತ್ತು ಅವುಗಳು ಸಕ್ರಿಯವಾಗಿ ಬಳಕೆಯಾಗುತ್ತಿವೆ. ಉಳಿದ ಖಾಲಿ ಗೋದಾಮುಗಳ ಹಂಚಿಕೆಗಾಗಿ ಕಳೆದ 2 ವರ್ಷಗಳಲ್ಲಿ 3 ಬಾರಿ ಟೆಂಡರ್ ಕರೆಯಲಾಗಿದ್ದರೂ, ಯಾರೊಬ್ಬರೂ ಭಾಗವಹಿಸದ ಕಾರಣ ಅವು ಸದ್ಯಕ್ಕೆ ಖಾಲಿ ಉಳಿದುಕೊಂಡಿವೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಹೆಚ್ಚುತ್ತಿದೆ ಅಡಿಕೆ ಆವಕ: ರೈತರಿಗೆ ಮೂಲಭೂತ ಸೌಕರ್ಯ
ಮಾರುಕಟ್ಟೆಯಲ್ಲಿ ಸೂಕ್ತ ಸವಲತ್ತುಗಳಿಲ್ಲದ ಕಾರಣ ಬೆಳೆಗಾರರು ಎ.ಪಿ.ಎಂ.ಸಿ.ಗೆ ಬರದೆ ಮನೆ ಬಾಗಿಲಲ್ಲೇ ಅಡಿಕೆ ಮಾರಾಟ ಮಾಡುತ್ತಿದ್ದಾರೆ ಎಂಬ ವಾದ ಸಕಾರಣವಾಗಿಲ್ಲ ಎಂದು ಸಮಿತಿ ಹೇಳಿದೆ. ರೈತರು ಮನೆ ಬಾಗಿಲಲ್ಲಿ ಮಾರಾಟ ಮಾಡುವುದಕ್ಕೆ ಅವರದೇ ಆದ ವೈಯಕ್ತಿಕ ಕಾರಣಗಳಿರಬಹುದೇ ವಿನಃ ಪ್ರಾಂಗಣದಲ್ಲಿ ಸೌಲಭ್ಯಗಳ ಕೊರತೆಯಿಲ್ಲ. ಮಾರುಕಟ್ಟೆಯಲ್ಲಿ ರೈತರಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಇದಕ್ಕೆ ಪೂರಕವಾಗಿ ಕಳೆದ ಮೂರು ವರ್ಷಗಳಲ್ಲಿ ಮಾರುಕಟ್ಟೆಗೆ ಆವಕವಾಗಿರುವ ಅಡಿಕೆ ಪ್ರಮಾಣ ನಿರಂತರವಾಗಿ ಏರಿಕೆಯಾಗಿರುವುದನ್ನು ಸಮಿತಿ ಬಹಿರಂಗಪಡಿಸಿದೆ:
ಪರ್ಮಿಟ್ ಮೂಲಕವೇ ಹೊರರಾಜ್ಯಕ್ಕೆ ಅಡಿಕೆ ಸಾಗಣೆ
ಅಡಿಕೆ ಸಾಗಾಣಿಕೆ ಸಂದರ್ಭದಲ್ಲಿ ಅಧಿಕಾರಿಗಳು ಪರವಾನಗಿ ಇಲ್ಲದೆ ಅಕ್ರಮಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಮತ್ತು ಹೊರ ರಾಜ್ಯಗಳ ಸಾಗಣೆಗೆ ಒತ್ತು ನೀಡುತ್ತಿದ್ದಾರೆ ಎಂಬ ಆರೋಪಕ್ಕೂ ಸಮಿತಿ ಅಂಕಿ-ಅಂಶಗಳ ಉತ್ತರವನ್ನೇ ನೀಡಿದೆ. ಎ.ಪಿ.ಎಂ.ಸಿ. ವ್ಯಾಪ್ತಿಯ ವರ್ತಕರು ಸಂಪೂರ್ಣವಾಗಿ ಇಲಾಖೆಯ ಅಧಿಕೃತ ಪರ್ಮಿಟ್ (ಪರವಾನಗಿ) ಮೂಲಕವೇ ಹೊರರಾಜ್ಯಗಳಿಗೆ ಅಡಿಕೆ ಕಳುಹಿಸುತ್ತಿದ್ದಾರೆ. ಕಳೆದ 3 ವರ್ಷಗಳಲ್ಲಿ ವಿತರಣೆಯಾಗಿರುವ ಅಧಿಕೃತ ಪರ್ಮಿಟ್‌ಗಳ ವಿವರ ಇಲ್ಲಿದೆ:
-
2023-24ನೇ ಸಾಲು: 279 ಪರ್ಮಿಟ್‌ಗಳು
-
2024-25ನೇ ಸಾಲು: 2,827 ಪರ್ಮಿಟ್‌ಗಳು
-
2025-26ನೇ ಸಾಲು: 6,359 ಪರ್ಮಿಟ್‌ಗಳು
ಈ ಎಲ್ಲಾ ವಾಸ್ತವಾಂಶಗಳನ್ನು ಮುಂದಿಟ್ಟಿರುವ ಸಾಗರ ಎ.ಪಿ.ಎಂ.ಸಿ. ಕಾರ್ಯದರ್ಶಿಗಳು, ಪತ್ರಿಕೆಯಲ್ಲಿ ಪ್ರಕಟವಾದ ವರದಿಯು ಸತ್ಯಕ್ಕೆ ದೂರವಾಗಿದ್ದು ಎಂಬುದಾಗಿ ಹೇಳುವ ಮೂಲಕ ಸಾರ್ವಜನಿಕರಿಗೆ ಸ್ಪಷ್ಟ ಪಡಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಸಾಗರ ಎಪಿಎಂಸಿ ಕಾಂಪೌಂಡ್ ನಿರ್ಮಾಣದಲ್ಲಿ ಅಕ್ರಮ ಶಂಕೆ: ಲೋಕಾಯುಕ್ತ ತನಿಖೆಗೆ ಹರತಾಳು ಹಾಲಪ್ಪ ಆಗ್ರಹ








