ವಿಧಾನಪರಿಷತ್ : ಅರಣ್ಯ ಇಲಾಖೆಯಲ್ಲಿ ಮುಂಚೂಣಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸಲಾಗಿದ್ದು, ಈಗಾಗಲೇ 310 ಅರಣ್ಯ ವೀಕ್ಷಕರ ನೇಮಕಾತಿ ಮಾಡಲಾಗಿದ್ದು, ಈಗ 540 ಅರಣ್ಯ ರಕ್ಷಕರ (ಗಾರ್ಡ್) ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿಂದು ಎಸ್.ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಾಡಾನೆ ದಾಳಿ, ಹುಲಿ ದಾಳಿ ಸೇರಿದಂತೆ ವನ್ಯಜೀವಿ ದಾಳಿಯಿಂದ ಮೃತಪಟ್ಟವರಿಗೆ ಪ್ರಸ್ತುತ 20 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಹಾವು ಕಚ್ಚಿ ಮೃತಪಟ್ಟವರಿಗೆ ಕೃಷಿ ಇಲಾಖೆಯ ವತಿಯಿಂದ 2 ಲಕ್ಷ ರೂ. ಪರಿಹಾರ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸರ್ಕಾರ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕವಾಗಿ ಆನೆ ಕಾರ್ಯಪಡೆಯನ್ನು ಮಂಜೂರು ಮಾಡಲು ಸೂಚಿಸಲಾಗಿದ್ದು, 2-3 ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು. ಈ ಪಡೆಯಲ್ಲಿ 32 ಸಿಬ್ಬಂದಿ ಇರುತ್ತಾರೆ. ಅವರು ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯದ ಜೊತೆಗೆ ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲೂ ಸಹಕರಿಸಲಿದ್ದಾರೆ ಎಂದರು.
ಆನೆಪಥ (ಕಾರಿಡಾರ್) ಮತ್ತು ಆವಾಸಸ್ಥಾನ ಸಂರಕ್ಷಣೆಗಾಗಿ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನ ಮಂದಿರ (ಐಐಎಸ್.ಸಿ)ಯೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪ್ರೊ. ಆರ್.ಸುಕುಮಾರ್ ಅವರ ತಂಡ ಅಧ್ಯಯನ ಆರಂಭಿಸಿದೆ ಎಂದು ತಿಳಿಸಿದರು.
ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ವಿಷ ಪ್ರಾಶನದಿಂದ ಮೃತಪಟ್ಟಿದ್ದು ಅತ್ಯಂತ ನೋವಿನ ಸಂಗತಿ. ಈಗಾಗಲೇ ತಪ್ಪಿತಸ್ಥರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿದೆ. ಹೊರಗುತ್ತಿಗೆ ಮುಂಚೂಣಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸುವಲ್ಲಿ ವಿಫಲರಾದ ಉಪ ವಲಯ ಅರಣ್ಯಾಧಿಕಾರಿ ಸೇರಿ ಅಧಿಕಾರಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.
ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಆನೆ-ಮಾನವ ಸಂಘರ್ಷ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಸರ್ಕಾರ ಆದ್ಯತೆ ನೀಡಿದೆ. ರಾಮನಗರ ಜಿಲ್ಲೆಯ ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿದೆ ಎಂದರು. ಆನೆ ಶಿಬಿರ ನಿರ್ಮಾಣ ಮಾಡಲು ಹಲವು ಕಡೆಗಳಿಂದ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಮಂಗಗಳ ಹಾವಳಿಯಿಂದ ಬೆಳೆ ಹಾನಿ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಮಂಗಳನ್ನು ಹಿಡಿಯಲು ಸೂಚನೆ ನೀಡುವುದಾಗಿ ತಿಳಿಸಿದರು.
1 ಲಕ್ಷ ಸಂಬಳದಲ್ಲಿ 10 ವರ್ಷಗಳಲ್ಲಿ 1 ಕೋಟಿ ಗಳಿಸುವುದು ಹೇಗೆ? ಇಲ್ಲಿದೆ ಮಾಹಿತಿ
BREAKING : ‘CM‘ ವಿರುದ್ಧ ಕೊಲೆ ಆರೋಪ : ಮಹೇಶ್ ತಿಮರೋಡಿ ವಿರುದ್ಧ `FIR’ ದಾಖಲು.!