ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಹೇಳಿಕೆ ವಿಚಾರವಾಗಿ ಡಿ.ಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ನಾನು ಹೇಳಿದ್ದು ಸತ್ಯಾಂಶ ಎಂದು ಡಿ.ಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ಸತ್ಯಾಂಶವನ್ನು ಹೇಳಿದ್ದೇನೆ. ನಿನ್ನೆ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ವಿಷಯ ಇತ್ತು. ಬಿಜೆಪಿಯವರು ತಕ್ಷಣ ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಜಂಪ್ ಮಾಡಿದರು. ಪ್ರಕರಣವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೇನೆ. ಇಂತಹ ರಾಜಕಾರಣದಿಂದ ಎಲ್ಲರಿಗೂ ದ್ರೋಹ ಬಗೆಯುತ್ತಿದ್ದಾರೆ ಎಂದು ಟೀಕಿಸಿದರು.
ದೇಶದ ಐಕ್ಯತೆ ಹಾಗೂ ಸಮಗ್ರತೆಗಾಗಿ ನಮ್ಮ ಪಕ್ಷ ಯಾವತ್ತೂ ಬದ್ಧವಾಗಿದೆ. ನಮ್ಮ ನಾಯಕರನ್ನೇ ನಾವು ಕಳೆದುಕೊಂಡಿದ್ದೇವೆ. ಯಡಿಯೂರಪ್ಪ ಬಗ್ಗೆ ಮಾತ್ರವಲ್ಲ ಇಡೀ ಬಿಜೆಪಿಯಲ್ಲಿ ಒಬ್ಬರಿಗೊಬ್ಬರು ಕುದಿತ ಇದೆ.
ಯಡಿಯೂರಪ್ಪರನ್ನು ಬಿಜೆಪಿ ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ಚುನಾವಣೆವರೆಗೆ ಯಡಿಯೂರಪ್ಪರನ್ನು ತಳ್ಳಿಕೊಂಡು ಹೋಗುತ್ತಿದ್ದಾರೆ. ಯಡಿಯೂರಪ್ಪ ಅವರ ಮಾತಲ್ಲೇ ದುಗುಡ, ನೋವು ಗೊತ್ತಾಗುತ್ತಿತ್ತು ಎಂದರು.