ಬೆಂಗಳೂರು: ಹೈಕೋರ್ಟ್ ನಿಂದ ಪ್ರತಿ ಗ್ರಾಮದಲ್ಲಿಯೂ ಸ್ಮಶಾನ ಜಮೀನನ್ನು ಕಾಯ್ದಿರಿಸದೇ ಇರುವಂತ ರಾಜ್ಯ ಸರ್ಕಾರದ ವಿರುದ್ಧ ಕೆಲ ದಿನಗಳ ಹಿಂದೆ ಗರಂ ಆಗಿತ್ತು. ಈ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಸ್ಮಶಾನ ಸೌಲಭ್ಯ ಕಲ್ಪಿಸೋ ಉದ್ದೇಶದಿಂದ ಸರ್ಕಾರಿ ಜಮೀನು ಲಭ್ಯವಿಲ್ಲದೇ ಇದ್ದರೇ, ಖಾಸಗಿ ಜಮೀನು ಖರೀದಿಸೋದಕ್ಕಾಗಿ ಪ್ರಸ್ತಾವನೆ ಸಲ್ಲಿಸುವಂತೆ ಆದೇಶಿಸಿದೆ.
ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಸಾರ್ವಜನಿಕ ಸ್ಮಶಾನ ಸೌಲಭ್ಯ ಕಲ್ಪಿಸುವ ಸಲುವಾಗಿ ಸರ್ಕಾರಿ ಜಮೀನು ಲಭ್ಯವಿಲ್ಲದ ಗ್ರಾಮಗಳಲ್ಲಿ ಖಾಸಗಿ ಭೂ ಮಾಲೀಕರಿಂದ ಅಗತ್ಯ ಜಮೀನನ್ನು ಖರೀದಿಸಿ, ಸ್ಮಶಾನಕ್ಕಾಗಿ ಕಾಯ್ದಿರಿಸಲು 6 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ ಎಂದಿದ್ದಾರೆ.
ಉಚ್ಛ ನ್ಯಾಯಾಲಯವು ದಿನಾಂಕ 20-08-2019ರಂದು ನೀಡಿದ ಆದೇಶವನ್ನು ಅನುಷ್ಠಾನಗೊಳಿಸಬೇಕಾಗಿರುತ್ತದೆ. ಆದ್ದರಿಂದ ರಾಜ್ಯದಲ್ಲಿ ಸಾರ್ವಜನಿಕ ಸ್ಮಶಾನ ಸೌಲಭ್ಯ ಕಲ್ಪಿಸುವ ಉದ್ದೇಶಕ್ಕಾಗಿ ಸರ್ಕಾರಿ ಜಮೀನು ಲಭ್ಯವಿಲ್ಲದ ಗ್ರಾಮಗಳಲ್ಲಿ ಖಾಸಗಿ ಭೂ ಮಾಲೀಕರಿಂದ ಅಗತ್ಯ ಜಮೀನನ್ನು ಖರೀದಿಸಲು ಅನುದಾನ ಕೋರಿ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.