ಬೆಂಗಳೂರು: ಹಲವು ಸಂದರ್ಭದಲ್ಲಿ ಸರಕಾರ ಲೂಟಿಯಲ್ಲಿ ತೊಡಗಿದೆ. ಕಾನೂನುಬಾಹಿರವಾಗಿ ಟೆಂಡರ್‍ಗಳನ್ನು ಮಾಡುತ್ತಿದೆ. ತನಗೆ ಬೇಕಾದವರಿಗೇ ಅವಕಾಶ ನೀಡುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.
ವಿಧಾನಸೌಧದ ಕೊಠಡಿ ಸಂಖ್ಯೆ 155 ರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್‍ಮೆಂಟ್ ಪೋರ್ಟಲ್‍ನಲ್ಲಿ ಟೆಂಡರ್‍ಗಳನ್ನು ಹಾಕುತ್ತಾರೆ. ಮಾಕ್ರ್ಸ್ ಕಾರ್ಡ್ ಪ್ರಿಂಟ್ ಮಾಡುವ ಕಾರ್ಯದಲ್ಲಿ ನಮ್ಮ ಸರಕಾರ ಇರುವಾಗಲೂ ಟೆಂಡರ್ ನೀಡಿದ್ದು, ಒಂದು ಮಾಕ್ರ್ಸ್ ಕಾರ್ಡ್ ಮುದ್ರಿಸಲು 9.45 ರೂ.ಗೆ ಟೆಂಡರ್ ಕೊಡಲಾಗಿತ್ತು. ಈ ಸರಕಾರ ಬಂದ ಬಳಿಕ ಪ್ಯಾರಾ ಮೆಡಿಕಲ್ ಬೋರ್ಡಿನ ಟೆಂಡರ್ ಕರೆದಿದ್ದು, ಒಂದು ಮಾಕ್ರ್ಸ್ ಕಾರ್ಡ್ ಮುದ್ರಿಸಲು 100 ರೂ ಕೋರಲಾಗಿತ್ತು. ಮಾತುಕತೆ ಬಳಿಕ 91 ರೂ.ಗೆ ಇಳಿಸಲಾಗಿದೆ ಎಂದು ಆಕ್ಷೇಪಿಸಿದರು.
ಕೆಲವೆಡೆ ವಿಷಯ ಹೊರಬಂದುದರಿಂದ ಮತ್ತೆ ಮಾತುಕತೆ ಮಾಡಿ ಒಂದು ಮಾಕ್ರ್ಸ್ ಕಾರ್ಡ್ ಮುದ್ರಿಸಲು 44 ರೂ., ಡಿಪ್ಲೊಮಾ ಸರ್ಟಿಫಿಕೇಟಿಗೆ 47 ರೂ. ಎಂದು ಬದಲಿಸಿದ್ದರು. ಇಂಟರ್ನ್‍ಶಿಪ್ ಸರ್ಟಿಫಿಕೇಟ್‍ಗೆ 44 ರೂ. ನಿಗದಿ ಮಾಡಿ ವರ್ಕ್ ಆರ್ಡರ್ ಕೊಟ್ಟಿದ್ದಾರೆ. ಕಳೆದ ನವೆಂಬರ್ 29ರಂದು ಈ ವರ್ಕ್ ಆರ್ಡರ್ ಕೊಡಲಾಗಿದೆ ಎಂದು ವಿವರಿಸಿದರು.
ನಗರದ ಸಂಜಯನಗರದ ಊರ್ದವ್ ಮೆನೇಜ್‍ಮೆಂಟ್ ಪ್ರೈವೇಟ್ ಲಿಮಿಟೆಡ್‍ಗೆ ಈ ವರ್ಕ್ ಆರ್ಡರ್ ಕೊಡಲಾಗಿದೆ. ಇದು ಗೊತ್ತಾಗಿ ಜನವರಿ 8ರಂದು ನಾನು ಸರಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ. ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಆಗಿದೆ ಎಂದು ಗಮನ ಸೆಳೆದಿದ್ದೆ. ಇದುವರೆಗೂ ಉತ್ತರ ಕೊಟ್ಟಿಲ್ಲ. ಇದರ ಹಣಕಾಸಿನ ಬಿಡ್ 4-12-2024ರಂದು ಅನುಮೋದನೆ ಪಡೆದಿದೆ ಎಂದು ಗಮನ ಸೆಳೆದರು. ಮೊದಲೇ ವರ್ಕ್ ಆರ್ಡರ್ ಕೊಡಲಾಗಿದೆ ಎಂದು ಆಕ್ಷೇಪಿಸಿದರಲ್ಲದೇ ಪತ್ರಗಳು, ದಾಖಲೆಗಳನ್ನು ಪ್ರದರ್ಶಿಸಿದರು. ಇದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲರ ಖಾತೆಗೆ ಸೇರಿದ್ದು ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಊರ್ದವ್ ಮೆನೇಜ್‍ಮೆಂಟ್ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ವೆಂಕಟರೆಡ್ಡಿ ಡಿ. ಪಾಟೀಲರಿಗೆ ಇದನ್ನು ಕೊಟ್ಟಿದ್ದು, ಅವರು ಸಚಿವ ಡಾ.ಶರಣಪ್ರಕಾಶ್ ಪಾಟೀಲರ ಹತ್ತಿರದ ಸಂಬಂಧಿ ಅಥವಾ ಸಮೀಪವರ್ತಿ ಎಂದು ಆರೋಪಿಸಿದರು. ಈ ಊರ್ದವ್ ಮೆನೇಜ್‍ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂಬುದು ಈವೆಂಟ್ ಮೆನೇಜ್‍ಮೆಂಟ್ ಕಂಪೆನಿ ಎಂದು ಆಕ್ಷೇಪಿಸಿದರು. ಇದಕ್ಕೂ ಪ್ರಿಂಟಿಂಗ್‍ಗೂ ಏನೂ ಸಂಬಂಧ ಇಲ್ಲ; ಅವರು ಯಾವತ್ತೂ ಮುದ್ರಣದ ಕೆಲಸ ಮಾಡಿಲ್ಲ ಎಂದು ದೂರಿದರು.
ಸಚಿವರಿಗೆ ಬೇಕಾದವರಿಗೆ ಕೊಡಲು ಕ್ರಮ ಕೈಗೊಂಡಿದ್ದಾರೆ. ಇದು ಬ್ಲ್ಯಾಕ್ ಲಿಸ್ಟೆಡ್ ಕಂಪೆನಿ. ಇದರ ಮೇಲೆ ಸುಮಾರು 20-25 ಕೇಸುಗಳಿವೆ. ಇಂಥ ಕಂಪೆನಿಗೆ ಟೆಂಡರ್ ಕೊಡಲಾಗಿದೆ ಎಂದು ಆರೋಪಿಸಿದರು.
ಬ್ಲ್ಯಾಕ್ ಲಿಸ್ಟೆಡ್ ಕಂಪೆನಿಗೆ ಟೆಂಡರ್ ಕೊಟ್ಟಿದ್ದಾರೆ. ಹಣಕಾಸಿನ ಬಿಡ್ ಇಲ್ಲದೆ ಟೆಂಡರ್ ನೀಡಿದ್ದಾರೆ. ನಾವು 9 ರೂ. 45 ಪೈಸೆಗೆ ಕೊಟ್ಟಾಗ 2.45 ಲಕ್ಷ ಎಂದು ತಿಳಿಸಿದ್ದೆವು. ಈ ಬಿಡ್‍ನಲ್ಲಿ ಎಷ್ಟು ಸಂಖ್ಯೆಯ ಸರ್ಟಿಫಿಕೇಟ್ ಮುದ್ರಣ ಎಂದು ತಿಳಿಸಿಲ್ಲ; ಅಂದರೆ ಅವರು ಎಷ್ಟು ಬೇಕಿದ್ದರೂ ಸಂಖ್ಯೆ ಹೇಳಿಕೊಳ್ಳಬಹುದು ಎಂದು ಟೀಕಿಸಿದರು. ಈ ಸಂಬಂಧ ನಾನು ಎರಡು-ಮೂರು ಪತ್ರ ಬರೆದರೂ ಮುಖ್ಯ ಕಾರ್ಯದರ್ಶಿ, ಇಲಾಖೆಯಿಂದ ಒಂದೇ ಒಂದು ಉತ್ತರ ಬಂದಿಲ್ಲ ಎಂದು ತಿಳಿಸಿದರು.
ಐಸಿಸಿ ಪುರುಷರ ಟೆಸ್ಟ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಕುಸಿದ ಭಾರತ | ICC Men’s Test Rankings
BREAKING: ಭಾರತ-ಪಾಕ್ ಉದ್ವಿಗ್ನತೆಯ ನಡುವೆ 2ನೇ ಬಾರಿಗೆ ಫತಾಹ್ ಕ್ಷಿಪಣಿ ಪರೀಕ್ಷೆ ನಡೆಸಿದ ಪಾಕಿಸ್ತಾನ!