ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (Karnataka Electricity Regulatory Commission – KRRC) ರಾಜ್ಯದಲ್ಲಿ ವಿದ್ಯುತ್ ದರಗಳನ್ನು ಹೆಚ್ಚಿಸಲು ಮುಂದಾಗಿದ್ದು, ಇದೇ ಆಕ್ಟೋಬರ್ 1ರಿಂದ ನೂತನ ದರಗಳು ಜಾರಿಗೆ ಬರಲಿದೆ.
ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಹೋಟೆಲ್ ಮಾಲೀಕರ ಸಂಘ ಭಾರೀ ವಿರೋಧ ವ್ಯಕ್ತಪಡಿಸಿದೆ. ಪ್ರತಿ ಯೂನಿಟ್ ಗೆ 43 ಪೈಸೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ದರ ಏರಿಕೆ ನಿರ್ಧಾರವನ್ನು ಮುಂದೂಡುವಂತೆ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಆಗ್ರಹಿಸಿದೆ.
ಈಗಾಗಲೇ ವಿದ್ಯುತ್ ಮೇಲಿನ ತೆರಿಗೆ ಶೇ. 9 ರಷ್ಟು ಇದೆ. ಇದಕ್ಕೆ ಶೇ 4 ಕ್ಕೆ ಇಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಈ ಸಂಬಂಧ ಮುಂದಿನ ವಾರ ಇಂಧನ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ. ಕೊರೊನಾ ಸಂಕಷ್ಟದ ಬಳಿಕ ಇತ್ತೀಚೆಗಷ್ಟೇ ಹೋಟೆಲ್ ಉದ್ಯಮದಲ್ಲಿ ಚೇತರಿಕೆ ಕಾಣುತ್ತಿದೆ. ಮತ್ತೆ ವಿದ್ಯುತ್ ದರ ಏರಿಸಿದರೆ ಉದ್ಯಮಕ್ಕೆ ಸಮಸ್ಯೆ ಆಗಲಿದೆ ಎಂದು ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ. ಕಲ್ಲಿದ್ದಲು ದರ ಗಣನೀಯ ಹೆಚ್ಚಳವಾಗಿದ್ದು, ವಿದ್ಯುತ್ ಖರೀದಿ ವೆಚ್ಚದಲ್ಲಿ ಏರಿಕೆಯಾಗಿದೆ.
ಇನ್ನೂ, ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ), ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ), ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಜೆಸ್ಕಾಂ). ಈ ವಿಭಾಗಗಳ ವಿದ್ಯುತ್ ಬೆಲೆ ಹೆಚ್ಚಳಕ್ಕೆ ಆಯೋಗ ಗ್ರೀನ್ ಸಿಗ್ನಲ್ ನೀಡಿದೆ.ಅಕ್ಟೋಬರ್ 2022 ರಿಂದ ಮಾರ್ಚ್ 2023 ರವರೆಗೆ ನೂತನ ನಿಯಮ ಜಾರಿಯಲ್ಲಿದೆ ಅಂತ ಆದೇಶದಲ್ಲಿ ತಿಳಿಸಲಾಗಿದೆ.