ಬೆಂಗಳೂರು: ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ರಾಜ್ಯ ಸರ್ಕಾರವು ದ್ವಿಭಾಷಾ ನೀತಿಯತ್ತ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಎಸ್ಎಸ್ಎಲ್ಸಿ (SSLC) ಪರೀಕ್ಷೆಯಲ್ಲಿ ಇನ್ನು ಮುಂದೆ ಹಿಂದಿ ಸೇರಿದಂತೆ ತೃತೀಯ ಭಾಷೆಯ ಅಂಕಗಳನ್ನು ಅಂತಿಮ ಫಲಿತಾಂಶಕ್ಕೆ ಪರಿಗಣಿಸದಿರಲು ತೀರ್ಮಾನಿಸಲಾಗಿದೆ. ಈ ಮೂಲಕ ಎಸ್ಎಸ್ಎಲ್ಸಿ ಪರೀಕ್ಷೆಯ ಒಟ್ಟು ಅಂಕಗಳು 625 ರಿಂದ 525 ಕ್ಕೆ ಇಳಿಕೆಯಾಗಲಿವೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವ ಮಧು ಬಂಗಾರಪ್ಪ, ತೃತೀಯ ಭಾಷಾ ವಿಷಯಗಳಿಗೆ ಇನ್ನುಮುಂದೆ ‘ಪಾಸ್’ ಅಥವಾ ‘ಫೇಲ್’ ಎಂಬ ಮಾನದಂಡ ಇರುವುದಿಲ್ಲ. ವಿದ್ಯಾರ್ಥಿಗಳು ಕಡ್ಡಾಯವಾಗಿ ಪರೀಕ್ಷೆ ಬರೆಯಬೇಕಾದರೂ, ಅವರಿಗೆ ಕೇವಲ ಎ, ಬಿ, ಸಿ, ಡಿ ಮಾದರಿಯಲ್ಲಿ ಗ್ರೇಡಿಂಗ್ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಾರ್ಚ್ 31 ರಿಂದಲೇ ಜಾರಿ
ಇದೇ ಮಾರ್ಚ್ 31 ರಂದು ನಡೆಯಲಿರುವ ತೃತೀಯ ಭಾಷಾ ಪರೀಕ್ಷೆಯಿಂದಲೇ ಈ ಹೊಸ ನಿಯಮ ಜಾರಿಗೆ ಬರಲಿದೆ. ಶೀಘ್ರದಲ್ಲೇ ಶಾಲಾ ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ ಹೊರಬೀಳಲಿದೆ.
ಯಾವ್ಯಾವ ಭಾಷೆಗಳಿಗೆ ಅನ್ವಯ?
ಹಿಂದಿ ಮಾತ್ರವಲ್ಲದೆ ಪಠ್ಯಕ್ರಮದಲ್ಲಿರುವ ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿದಂತೆ ಎಲ್ಲಾ ತೃತೀಯ ಭಾಷೆಗಳಿಗೂ ಈ ನಿಯಮ ಅನ್ವಯವಾಗಲಿದೆ.
ನಿರ್ಧಾರಕ್ಕೆ ಕಾರಣವೇನು?
ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ರಾಜ್ಯದಲ್ಲಿ ತ್ರಿಭಾಷಾ ಸೂತ್ರದ ಅಗತ್ಯವಿಲ್ಲ ಹಾಗೂ ಹಿಂದಿ ಕಡ್ಡಾಯ ಪಾಸ್ ಮಾನದಂಡವನ್ನು ಕೈಬಿಡಬೇಕು ಎಂದು ಕನ್ನಡಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ್ದವು. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಾಗ, ಅವರು ಕನ್ನಡಪರ ಸಂಘಟನೆಗಳ ಬೇಡಿಕೆಗೆ ಸಹಮತ ವ್ಯಕ್ತಪಡಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಪ್ರಾಧಿಕಾರದ ಸ್ವಾಗತ
ಸರ್ಕಾರದ ಈ ತೀರ್ಮಾನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸ್ವಾಗತಿಸಿದ್ದಾರೆ. “ಇದು ರಾಜ್ಯ ಶಿಕ್ಷಣ ನೀತಿಯಲ್ಲಿ ಪ್ರತಿಪಾದಿಸಲಾದ ದ್ವಿಭಾಷಾ ನೀತಿಗೆ ಪೂರಕವಾಗಿದೆ. ವಿದ್ಯಾರ್ಥಿಗಳ ಮೇಲಿನ ಅನಗತ್ಯ ಭಾಷಾ ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ ಕನ್ನಡದ ಬೆಳವಣಿಗೆಗೂ ಇದು ಪ್ರೇರಕವಾಗಲಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇತರ ಪ್ರಮುಖ ನಿರ್ಧಾರಗಳು:
ಸಾಮಾಜಿಕ ಜಾಲತಾಣ ನಿರ್ಬಂಧ: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿರ್ಬಂಧಿಸುವ ಸರ್ಕಾರದ ಪ್ರಸ್ತಾವನೆಗೆ ಪೋಷಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಉಚಿತ ನೈತಿಕ ಶಿಕ್ಷಣ ಪುಸ್ತಕ: ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಸಿದ್ಧಪಡಿಸಿರುವ ‘ನೈತಿಕ ಶಿಕ್ಷಣ’ ಪುಸ್ತಕಗಳನ್ನು ಉಚಿತವಾಗಿ ಒದಗಿಸಲು ನಿರ್ಧರಿಸಲಾಗಿದೆ.








