ಬೆಂಗಳೂರು : ರಾಜ್ಯ ಸರ್ಕಾರಕ್ಕೆ ಸಾವಿರ ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಆರನೇ ಗ್ಯಾರಂಟಿ ಘೋಷಣೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ದೆಹಲಿಯಲ್ಲಿ ಗುರುವಾರ ಈ ಕುರಿತಾಗಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಭೂಮಿ ಗ್ಯಾರಂಟಿಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಭೂಮಿಯ ಹಕ್ಕು ಪತ್ರ ಇಲ್ಲದ ಲಕ್ಷಾಂತರ ಜನರಿಗೆ ನಾವು ಹಕ್ಕುಪತ್ರ, ಪಟ್ಟಾ ದಾಖಲೆ ನೀಡುತ್ತಿದ್ದೇವೆ. ಜತೆಗೆ ಜನರಿಗೆ ಪಕ್ಕಾ ಖಾತೆ ಹಂಚಿಕೆ ಮಾಡುತ್ತಿದ್ದೇವೆ. ಪಂಚ ಗ್ಯಾರಂಟಿಗಳ ಹೊರತಾಗಿ ಇದು ನಮ್ಮ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಮಾಹಿತಿ ನೀಡಿದರು. ಮುಂದಿನ ಒಂದು ಸಾವಿರ ದಿನ ಹೇಗಿರಲಿದೆ ಎಂದು ಕೇಳಿದಾಗ, “ಬಹಳ ಪ್ರಕಾಶಮಾನವಾಗಿ, ಬಲಿಷ್ಠವಾಗಿರಲಿದೆ ಎಂದು ತಿಳಿಸಿದರು.
ನಾವು ರಾಜಕಾರಣದಲ್ಲಿದ್ದೇವೆ, ರಾಜಕಾರಣ ಮಾಡಲೇಬೇಕು. ನನಗೆ ಸದಾ ಯಶಸ್ಸು ಸಿಗುತ್ತದೆ. ಸ್ವಲ್ಪ ಶ್ರಮ ಬೇಕಾಗುತ್ತದೆ ಅಷ್ಟೇ. ಅಧಿಕಾರ ಹಂಚಿಕೆ ವಿಚಾರವಾಗಿ ನಾವು ಈ ವಿಚಾರವಾಗಿ ಚರ್ಚೆ ಮಾಡಿಲ್ಲ. ಪಕ್ಷ ತನ್ನದೇ ಆದ ಗುರಿ ಹೊಂದಿದ್ದು, ಪಕ್ಷದ ಯಶಸ್ಸು ಹಾಗೂ ಪಕ್ಷದ ಹಿತಾಸಕ್ತಿ, ಕರ್ನಾಟಕ ಹಾಗೂ ದೇಶದ ಹಿತದೃಷ್ಟಿ ಆಧಾರದ ಮೇಲೆ ನಮ್ಮ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸೂಕ್ತ ಸಮಯದಲ್ಲಿ ತೀರ್ಮಾನ ಮಾಡುತ್ತಾರೆ. ಮಾಧ್ಯಮಗಳು ಹಾಗೂ ಬೇರೆಯವರು ಈ ಭೇಟಿಗೆ ಹೊಸ ರೂಪ, ಬೇರೆ ಬಣ್ಣ ನೀಡುತ್ತಿದ್ದೀರಿ. ನಮಗೆ ಇದರಲ್ಲಿ ವಿಶೇಷವಿಲ್ಲ ಎಂದರು.








