ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಡಿಯ ಏತ ನೀರಾವರಿ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕರಡು ನೀತಿ ಹಾಗೂ ಮಾರ್ಗಸೂಚಿಗಳಿಗೆ ಅನುಮೋದನೆಯನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನೀಡಲಾಯಿತು ಎಂದು ಸಚಿವ ಗೋವಿಂದ ಕಾರಜೋಳ ಮಾಹತಿ ನೀಡಿದ್ದಾರೆ.
ದಿನಾಂಕ:21.01.2021ರಂದು ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ, ಜಲಸಂಪನ್ಮೂಲ ಇಲಾಖೆಯಡಿಯಲ್ಲಿನ ಏತ ನೀರಾವರಿ ಯೋಜನೆಗಳು, ಕೆರೆ ತುಂಬಿಸುವ ಯೋಜನೆಗಳು ಹಾಗೂ ಅಚ್ಚುಕಟ್ಟು ಪ್ರದೇಶದಲ್ಲಿ ಸೂಕ್ಷ್ಮ ನೀರಾವರಿ ಒದಗಿಸುವ ಏತ ನೀರಾವರಿ ಯೋಜನೆಗಳ ಮಿತವ್ಯಯ ಹಾಗೂ ಪರಿಣಾಮಕಾರಿ ಕಾರ್ಯಾಚರಣೆ ಹಾಗೂ ನಿರ್ವಹಣಾ ನೀತಿ ಹಾಗೂ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವ ಅಗತ್ಯತೆ ಕುರಿತು ಚರ್ಚಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಜ.ಸಂ.ಇ., ಕಾರ್ಯದರ್ಶಿಗಳು, ಜ.ಸಂ.ಇ., ನಾಲ್ಕು ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಹಾಗೂ ಏತ ನೀರಾವರಿ ಯೋಜನೆಗಳ ಪರಿಣಿತ ಸಮಾಲೋಚಕರೊಂದಿಗೆ ಸಭೆ ನಡೆಸಿರುತ್ತಾರೆ. ಸಭೆಯಲ್ಲಿ ವಿಸ್ತೃತವಾದ ಚರ್ಚೆಯ ನಂತರ ಏತ ನೀರಾವರಿ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿ ಹಾಗೂ ಮಾರ್ಗಸೂಚಿಗಳನ್ನು ತಯಾರಿಸಲು ಉನ್ನತ ಅಧಿಕಾರಿಗಳು ಹಾಗೂ ಏತ ನೀರಾವರಿ ಯೋಜನೆಗಳ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸುವಂತೆ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಏತ ನೀರಾವರಿ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಈ ಕೆಳಕಂಡಂತಿವೆ:
I. ಸ್ಥಳೀಯ ಕಾರ್ಯಾಚರಣೆ ಮತ್ತು ನಿರ್ವಹಣಾ ಏಜೆನ್ಸಿಗಳಲ್ಲಿ ವೃತ್ತಿ ಪರತೆಯ ಕೊರತೆ
II. ಅನನುಭವಿ ಕಾರ್ಯಾಚರಣೆ ಸಿಬ್ಬಂದಿ
III. ಪ್ರಮುಖ ಸ್ಥಾವರ ಹಾಗೂ ಯಂತ್ರೋಪಕರಣಗಳ ನೈಜ ಸಮಯದ ಕಾರ್ಯಕ್ಷಮತೆಯ ಮಾಹಿತಿಯ ಕೊರತೆ
ಈ ಯಂತ್ರಗಳ ಕಾರ್ಯಕ್ಷಮತೆ ಮತ್ತು ವಸ್ತುಸ್ಥಿತಿಯ ನಿರಂತರ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ (Monitoring & Evaluation) ದೊಂದಿಗೆ ಮೇಲ್ವಿಚಾರಣೆ ಮತ್ತು ಕಾರ್ಯಾಚರಣೆಗಳ Optimization ಮಾಡುವ ಮೂಲಕ ನಿರ್ವಹಣಾ ವೆಚ್ಚದಲ್ಲಿ ಗಮನಾರ್ಹವಾದ ಕಡಿತ, ಸೇವಾ ವಿತರಣೆಯಲ್ಲಿ ಗಮನಾರ್ಹ ಸುಧಾರಣೆ ಮತ್ತು ಏತ ನೀರಾವರಿ ಯೋಜನೆಗಳ ಸುಸ್ಥಿರ ಕಾರ್ಯಾಚರಣೆಯನ್ನು ಮಾಡಬಹುದಾಗಿದೆ. ಕಾರ್ಯಕ್ಷಮತೆಯ ಸಮಸ್ಯೆಗಳನ್ನು ನಿವಾರಿಸುವ ದೃಷ್ಟಿಯಿಂದ ಉಪಸಮಿತಿಯು, ಅಸಮರ್ಪಕ ಕಾರ್ಯಕ್ಷಮತೆ, ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣೆ ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸುವ ಸೂಕ್ತ ಕ್ರಮಗಳೊಂದಿಗೆ O & M ಅಂದಾಜುಗಳನ್ನು ಸಿದ್ದಪಡಿಸುವುದು ಮತ್ತು ದೀರ್ಘಾವಧಿಯ O & M ಒಪ್ಪಂದಗಳನ್ನು ನೀಡುವುದಕ್ಕಾಗಿ ಸಾಮಾನ್ಯ ಮಾರ್ಗಸೂಚಿಗಳನ್ನು ಅಭಿವೃದ್ಧಿಪಸಿಸಿದೆ. ಮಾರ್ಗಸೂಚಿಗಳು ಮತ್ತು ಶಿಫಾರಸ್ಸುಗಳ ಸಾರಾಂಶವು ಈ ಕೆಳಗಿನಂತಿದೆ.
I. ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವುದು ಮತ್ತು ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುವುದು.
II. ಏತ ನೀರಾವರಿ ಯೋಜನೆಗಳ ಅಂದಾಜುಗಳನ್ನು ತಯಾರಿಸಲು ಮಾರ್ಗಸೂಚಿಗಳು
III. ಕಾರ್ಯಾಚರಣೆ ಹಾಗೂ ನಿರ್ವಹಣೆ ಒಪ್ಪಂದಗಳಿಗೆ ಟೆಂಡರ್ ಮಾರ್ಗಸೂಚಿ ಸಿದ್ದಪಡಿಸಲು ಮಾರ್ಗಸೂಚಿಗಳು.
ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿತ ಸ್ಥಳಗಳಲ್ಲಿ ಅಗತ್ಯವಾದ Pressure/headದೊಂದಿಗೆ ಬೆಳೆಗಳಿಗೆ ನೀರಿನ ಅವಶ್ಯಕತೆಯ ಅನುಗುಣವಾಗಿ ನೀರಾವರಿ ವೇಳಾಪಟ್ಟಿಯ ಪ್ರಕಾರ ನೀರನ್ನೊದಗಿಸಲು ಮತ್ತು ಕೆರೆ ತುಂಬುವ ಅವಶ್ಯಕತೆಗಳನ್ನು ಸುಸ್ಥಿರ ಮಿತವ್ಯಯಕಾರಿ ಕಾರ್ಯಾಚರಣೆಯ ಮೂಲಕ ಪೂರೈಸಲು ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಮಿತವ್ಯಯಕಾರಿ ಕಾರ್ಯಾಚರಣೆ ಮತ್ತು ನಿರ್ವಹಣೆ (O & M) ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು ಈ ನೀತಿಯ ಉದ್ದೇಶವಾಗಿದೆ.