ಬೆಂಗಳೂರು : ದೇಶದಲ್ಲಿ130 ಕೋಟಿ ಜನರ ಮಾರುಕಟ್ಟೆ ಬೇರೆ ಯಾವ ದೇಶದಲ್ಲಿಯೂ ಸಿಗುವುದಿಲ್ಲ. ಜನರ ಬೇಕು ಬೇಡಿಕೆಗಳನ್ನು ಈಡೇರಿಸಲು ಜನರಿಗೆ ಕೌಶಲ್ಯ ಬೇಕು. ಆ ಕೌಶಲ್ಯದ ಉಪಯೋಗವೇ ದೇಶದ ಭವಿಷ್ಯವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಹೇಳಿದರು.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಿಶ್ವ ಯುವ ಕೌಶಲ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕೌಶಲ್ಯ ನೈಸರ್ಗಿಕವಾಗಿ ದೇವರು ಕೊಟ್ಟಿರುವಂತಹ ವರ. ಅದಕ್ಕೆ ನಾವು ಜ್ಞಾನವನ್ನು ಜೋಡಿಸಬೇಕು. ಪ್ರತಿಯೊಬ್ಬರಲ್ಲಿ ವಿಭಿನ್ನವಾದ ಕೌಶಲ್ಯಗಳಿರುತ್ತವೆ. ಅವುಗಳನ್ನು ಉಪಯೋಗ ಮಾಡಿಕೊಳ್ಳಬೇಕು. ನಾನು ಪ್ರತಿಯೊಬ್ಬ ಮನುಷ್ಯನಲ್ಲಿರುವ ಗುಣಾತ್ಮಕವಾದ ಕೌಶಲ್ಯವನ್ನು ಗುರುತಿಸುವ ಪ್ರಯತ್ನ ಮಾಡುತ್ತಿರುತ್ತೇನೆ. ಯಾರೂ ಜ್ಞಾನ, ಕೌಶಲ್ಯವನ್ನುಕದಿಯಲು ಸಾಧ್ಯವಿಲ್ಲ. ಇವತ್ತಿನ ಪೈಪೋಟಿಯ ಕಾಲದಲ್ಲಿ ನಿಮ್ಮ ಕೌಶಲ್ಯಕ್ಕೆ ಜ್ಞಾನವನ್ನು ಸೇರಿಸಿದರೆ ಅದಕ್ಕೆ ಬೆಲೆ ಬರುತ್ತದೆ ಎಂದು ಹೇಳಿದರು.
ನಮ್ಮ ಜನಸಂಖ್ಯೆ ಮಾರಕ, ಬಹಳ ದೊಡ್ಡ ಭಾರ ಎಂದು ಹಿಂದೆ ಮಾತನಾಡುತ್ತಿದ್ದರು. ಈ ದೇಶದಲ್ಲಿ 46% ಯವಕರಿದ್ದಾರೆ. ಅವರಿಗೆ ಜ್ಞಾನ, ಕೌಶಲ್ಯ, ಅವಕಾಶ ಕೊಟ್ಟರೆ ಅದು ದೇಶ ಕಟ್ಟಲು ಅನುಕೂಲ ಆಗುತ್ತದೆ. ನಮ್ಮ ದೇಶದಲ್ಲಿರುವಂತಹ ಮಾರುಕಟ್ಟೆ ಬೇರೆ ಯಾವ ದೇಶದಲ್ಲಿಯೂ ಸಿಗುವುದಿಲ್ಲ. ಕೌಶಲ್ಯ ಜನರಲ್ಲಿ ಹೆಚ್ಚಿದಂತೆ ಮಾರುಕಟ್ಟೆಯ ಉಪಯೋಗ ಆಗುತ್ತದೆ ಎಂದು ತಿಳಿಸಿದರು.
ಈ ದೇಶವನ್ನು ದೊಡ್ಡ ದೊಡ್ಡ ಶ್ರೀಮಂತರು ಕಟ್ಟುತ್ತಿಲ್ಲ. ದುಡಿಯುವ ವರ್ಗ ದೇಶವನ್ನು ಕಟ್ಟುತ್ತಿದ್ದಾರೆ. ಆರ್ಥಿಕತೆಯಲ್ಲಿ ಬದಲಾವಣೆ ತರುತ್ತಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿಯಾಗುತ್ತಿದೆ. ನಮ್ಮ ಯುವಕರು ಎಲ್ಲದರಲ್ಲಿಯೂ ಮುಂದೆ ಬರುತ್ತಿದ್ದಾರೆ. ಕೌಶಲ್ಯ ಮತ್ತು ತಂತ್ರಜ್ಞಾನವನ್ನು ನಮ್ಮ ಜೀವನದ ಪ್ರತಿಯೊಂದು ಉಪಯೋಗ ಆಗಬೇಕು. ಐಟಿ ಬಿಟಿಯಲ್ಲಿಯೂ ಜನ ಸಾಮಾನ್ಯರ ಉಪಯೋಗಕ್ಕೆ ತಕ್ಕ ಹಾಗೆ ಕೌಶಲ್ಯ ಉಪಯೋಗ ಆಗಬೇಕು ಎಂದು ಹೇಳಿದರು.
ಕೌಶಲ್ಯ ಭರಿತ ಕರ್ನಾಟಕ ಆಗುವ ಕನಸು ಕಾಣುತ್ತಿದ್ದೇನೆ. ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಮಟ್ಟದ ಶಿಕ್ಷಣ ದೊರೆಯಬೇಕು. ನಮ್ಮ ರಾಜ್ಯದಲ್ಲಿ 200 ಹೈಟೆಕ್ ಐಟಿಐ ಕಾಲೇಜುಗಳನ್ನು ಮಾಡುತ್ತಿದ್ದೇವೆ. ಬಜೆಟ್ ನಲ್ಲಿ ಘೋಷಿಸಿದಂತೆ ಆರು ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿಗಳನ್ನಾಗಿ ಪರಿವರ್ತನೆ ಮಾಡುತ್ತಿದ್ದೇವೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕು ಎಂದು ಸಿಎಂ ಹೇಳಿದರು.
75 ಸಾವಿರ ಯುವಕರಿಗೆ ಕೌಶಲ್ಯಾಭಿವೃದ್ಧಿ
ಅಮೃತ ಮಹೋತ್ಸವ ಯೋಜನೆಯಲ್ಲಿ 75 ಸಾವಿರ ಯುವಕರಿಗೆ ಕೌಶಲ್ಯಾಭಿವೃದ್ಧಿ ನೀಡಲಾಗುತ್ತಿದೆ. ಅದು ಕೆಲವು ದಿನಗಳಲ್ಲಿ ಪೂರ್ಣ ಆಗುತ್ತದೆ. ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಎರಡು ಇಲಾಖೆಯ ಮೂಲಕ ಹಲವಾರು ಕಾರ್ಯಕ್ರಮಗಳು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಕೌಶಲ್ಯಾಭಿವೃದ್ದಿ ಮತ್ತು ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ, ಕೌಶಲ್ಯಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಮತ್ತು ಯುವಕರ ನವೀನ ಕೌಶಲ್ಯಗಳ ಪ್ರದರ್ಶನವನ್ನು ಮುಖ್ಯಮಂತ್ರಿಗಳು ವೀಕ್ಷಣೆ ಮಾಡಿದರು.