ಬೆಂಗಳೂರು : ಕಳೆದ ವರ್ಷ ದೇಶದಲ್ಲಿ ಕೆಂಪು ರಾಣಿಯಂದೇ ಸದ್ದು ಮಾಡಿದ್ದ ಟೊಮ್ಯಾಟೋ ದರ ಗ್ರಾಹಕರ ಜೇಬನ್ನು ಸುಟ್ಟಿತ್ತು. ನಂತರ ಇರುಳು ಕೂಡ ಗ್ರಾಹಕರ ಕಣ್ಣಲ್ಲಿ ನೀರು ಬರಿಸುವ ದರ ಮುಟ್ಟಿತ್ತು. ಇದಾದ ಬಳಿಕ ಇದೀಗ ಬೆಳ್ಳುಳ್ಳಿ ದರ ಕೂಡ ಏರಿಕೆಯಾಗಿದ್ದು ಚಿಲ್ಲರೆ ಮಾರುಕಟ್ಟೆಗಳಲ್ಲಿ ಕೆಜಿಗೆ 450 ರೂಪಾಯಿಗೆ ಏರಿಕೆಯಾಗಿದೆ.
ಸಗಟು ಬೆಳ್ಳುಳ್ಳಿ ದರ ಇಳಿಕೆ ಕಾಣುತ್ತಿದ್ದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ದುಬಾರಿ ದರವೇ ಮುಂದುವರಿದಿದೆ. ಇಲ್ಲಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ * 320-350 ರಿಂದ * 280-300 ಕ್ಕೆ ತಗ್ಗಿದ್ದು, ಇನ್ನೆರಡು ವಾರಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲೂ ಗ್ರಾಹಕರು ದರ ಇಳಿಕೆಯನ್ನು ಕಾಣಲಿದ್ದಾರೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಫಾರಮ್ 400 ವರೆಗೆ ಹಾಗೂ ಜವಾರಿ 450 ವರೆಗೆ ಬೆಲೆಯಿದೆ. ಯಶವಂತಪುರ ಹಾಗೂ ದಾಸನಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿ ಬೆಂಗಳೂರಿಗೆ ಬುಧವಾರ ಮಧ್ಯಪ್ರದೇಶದಿಂದ ಸುಮಾರು 2100 ಚೀಲ ಬೆಳ್ಳುಳ್ಳಿ ಬಂದಿದೆ. ಎ ದರ್ಜೆಯ ಬೆಳ್ಳುಳ್ಳಿ ಬೆಲೆ ಕೆಜಿಗೆ ₹ 300 ಇತ್ತು. ಕಳೆದ ನಾಲ್ಕು ತಿಂಗಳಲ್ಲಿ ಇದು ಕಡಿಮೆ ಬೆಲೆಯಾಗಿದೆ. ಮುಂದುವರಿದು ಆವಕ ಹೆಚ್ಚಾದಂತೆ ಸ್ಥಳೀಯ ಅಂಗಡಿ ಮುಂಗಟ್ಟುಗಳಲ್ಲೂ ದರ ತಗ್ಗುವ ನಿರೀಕ್ಷೆಯಿದೆ.
ವರ್ತಕ ಎಸ್.ಆನಂದನ್ ಮಾತನಾಡಿ, ಮಧ್ಯಪ್ರದೇಶದಲ್ಲಿ ಕೊಯ್ದು ಆರಂಭವಾಗಿದ್ದು, ಹೆಚ್ಚಿನ ಪ್ರಮಾಣದ ಬೆಳೆ ಬರುತ್ತಿದೆ. ಇದು ಸಗಟು ಬೆಲೆ ಇಳಿಕೆಯಾಗಲು ಕಾರಣವಾಗಿದೆ. ಮುಂದಿನ ವಾರದಲ್ಲಿ ರಾಜಸ್ಥಾನದಲ್ಲೂ ಕೊಯ್ದು ಶುರುವಾಗಲಿದ್ದು, ಎರಡೂ ರಾಜ್ಯಗಳಿಂದ ಕರ್ನಾಟಕಕ್ಕೆ ಹೆಚ್ಚಿನ ಬೆಳೆ ಬರುವುದರಿಂದ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ ಎಂದರು.