ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಪಾರದರ್ಶಕತೆ ಹಾಗೂ ಉತ್ತಮ ಗುಣಮಟ್ಟದ ಪೌಷ್ಟಿಕಾಂಶದ ಆಹಾರ ಪೂರೈಕೆಯೇ ಇಲಾಖೆಯ ಮುಖ್ಯ ಗುರಿ ಎಂದು ಇಲಾಖೆ ಆಯುಕ್ತರು ಅಕ್ರಂ ಪಾಷ ಹೇಳಿದರು.
ಇಲಾಖೆ ವತಿಯಿಂದ ರಾಜ್ಯಾದ್ಯಂತ ನಡೆಸುವ ವಸತಿ ನಿಲಯಗಳಿಗೆ ಆಹಾರ ಸರಬರಾಜು ಪದ್ಧತಿ ಉನ್ನತೀಕರಣ ಹಾಗೂ ಗುಣಮಟ್ಟದ ಆಹಾರ ಪೂರೈಕೆ ವ್ಯವಸ್ಥೆಯನ್ನು ಸಂಪೂರ್ಣ ಗಣಕೀಕರಣಗೊಳಿಸಿದ ನಿಲಯ ಪೋರ್ಟಲ್ ಗೆ ಶನಿವಾರ ಹೊಸಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯುಕ್ತರು ಚಾಲನೆ ನೀಡಿ ಮಾತನಾಡಿದರು.
31 ಜಿಲ್ಲೆಗಳಲ್ಲಿ ಹೊಸ ಆಹಾರ ಸರಬರಾಜು ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಪ್ರಥಮ ಬಾರಿಗೆ ಆಹಾರ ಪದ್ಧತಿಯನ್ನು ಗಣಕೀಕರಣಗೊಳಿಸಿದ ಪೋರ್ಟಲ್‌ನ್ನು ಜಾರಿಗೆ ತರಲಾಗಿದೆ. ಈ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ಇಲಾಖೆ ಮುಂದಡಿ ಇಟ್ಟಿದೆ ಎಂದರು.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕೆಂದು ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿ ಅವರ ಇಚ್ಛೆಯಾಗಿತ್ತು. ಟೆಂಡರ್ ದಾರರು ಆಹಾರ ಉತ್ತಮ ಗುಣಮಟ್ಟದ ಪೌಷ್ಟಿಕಾಂಶದ ಆಹಾರ ಪೂರೈಸಬೇಕು ಎಂದು ಆಯುಕ್ತರು ತಿಳಿಸಿದರು.
ಯಾವುದೇ ರಾಜ್ಯದಲ್ಲೂ ಸರ್ಕಾರದಿಂದ ಇಷ್ಟು ದೊಡ್ಡ ಮಟ್ಟದ ಹಾಸ್ಟೆಲ್‌ಗಳ ನಿರ್ವಹಣೆ ಇಲ್ಲ. ಸರ್ಕಾರ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಹಾಸ್ಟೆಲ್‌ಗಳನ್ನು ನಿರ್ವಹಣೆ ಮಾಡುತ್ತಿದೆ. ಹಾಸ್ಟೆಲ್‌ಗೆ ಬರುವ ವಿದ್ಯಾರ್ಥಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಬಡತನದ ಹಿನ್ನೆಲೆಯುಳ್ಳವಾಗಿರುತ್ತಾರೆ. ವಾರ್ಡನ್‌ಗಳು ಶುಚಿತ್ವ ಮತ್ತು ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಉತ್ತಮ ವಾತಾವರಣ ಕಲ್ಪಿಸಬೇಕು. ನೂತನ ಸುಧಾರಿತ ಪದ್ದತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ಎಂದು ವಾರ್ಡನ್ ಮತ್ತು ಅಧಿಕಾರಿಗಳಿಗೆ ಆಯುಕ್ತರು ಕಿವಿಮಾತು ಹೇಳಿದರು.
ನಿಲಯ ಪೋರ್ಟಲ್ ವಿಚಾರದಲ್ಲಿ ಆಯಾ ಜಿಲ್ಲಾಧಿಕಾರಿಗಳನ್ನು ಸಂಪೂರ್ಣ ಭಾಗಿಯಾಗಿ ಮಾಡಲಾಗಿದೆ. ಇಡೀ ರಾಷ್ಟ್ರಕ್ಕೆ ಈ ಪದ್ಧತಿ ಮಾದರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಂಟಿ ನಿರ್ದೇಶಕ ಪ್ರದೀಪ್ ಬಿ. ಎಸ್ . ಮಾತನಾಡಿ, ಹಾಸ್ಟೆಲ್ ಗಳಿಗೆ ಆಹಾರ ಪೂರೈಕೆ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿಸಲು ತಂತ್ರಾಂಶವನ್ನು ಜಾರಿಗೆ ತರಲಾಗಿದೆ. ಪಾರದರ್ಶಕತೆ ಹಾಗೂ ಪರಿಣಾಮಕಾರಿಯಾಗಿ ಆಹಾರ ನೀಡಲು ಈ ಕ್ರಮಕೈಗೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಸರ್ಕಾರಿ ಸಂಸ್ಥೆಗಳು ಆಹಾರ ಸರಬರಾಜು ಪ್ರಕ್ರಿಯೆಯನ್ನು ಈ ಹಿಂದಿನಿಂದಲೂ ಮಾಡುತ್ತಿದ್ದು ಕಾಲಕಾಲಕ್ಕೆ ತಕ್ಕಂತೆ ಆಹಾರ ಸರಬರಾಜು ಪ್ರಕ್ರಿಯೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗುತಿದೆ, ಹೊಸ ಬದಲಾವಣೆಗಳನ್ನು ಆಡಳಿತಾತ್ಮಕ ಹಿತದೃಷ್ಟಿ ಹಾಗೂ ಇಲಾಖೆಯ ವಿದ್ಯಾರ್ಥಿನಿಲಯಗಳ ಗುಣಮಟ್ಟ ಸುಧಾರಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಸದರಿ ಪ್ರಕ್ರಿಯೆಯು ನಿರಂತರ ಪ್ರಕ್ರಿಯೆಯಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ನಿರ್ದೇಶಕರಾದ ಸೋಮಶೇಖರ್, ಭವ್ಯ, ಮುನಿರಾಜು ಹಾಗೂ ಇನ್ನಿತರ ಗುತ್ತಿಗೆದಾರರು ಹಾಜರಿದ್ದರು.
ಏನಿದು ನಿಲಯ ಪೋರ್ಟಲ್?
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 2597 ವಿದ್ಯಾರ್ಥಿ ನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ಇಲಾಖೆ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಸರಬರಾಜು ಪದ್ಧತಿಯನ್ನು ಉನ್ನತೀಕರಿಸಲು ಹಾಗೂ ಆಹಾರ ಸರಬರಾಜು ವ್ಯವಸ್ಥೆಯನ್ನು ಸಂಪೂರ್ಣ ಗಣಕೀಕರಗೊಳಿಸುವ ಯೋಜನೆ ಇದಾಗಿದೆ.
ಈ ಹೊಸ ಪದ್ಧತಿಯಲ್ಲಿ ವಿದ್ಯಾರ್ಥಿನಿಲಯಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮತ್ತು ಪಾರದರ್ಶಕವಾಗಿ ಆಹಾರ ಪೂರೈಕೆ ಮಾಡಲು ಕ್ರಮವಹಿಸಲಾಗಿದೆ. ವಿದ್ಯಾರ್ಥಿನಿಲಯಗಳಿಗೆ ಅವಶ್ಯವಿರುವ ಆಹಾರ ಸಾಮಗ್ರಿಗಳನ್ನು ಆನ್‌ಲೈನ್ ಮೂಲಕ ಬೇಡಿಕೆ ಸಲ್ಲಿಸಲು ನಿಲಯ ಮೇಲ್ವಿಚಾರಕರಿಗೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಪೂರೈಕೆ ಮಾಡುತ್ತಿರುವ ಆಹಾರ ಸಾಮಗ್ರಿಗಳ ಬಗ್ಗೆ ದೂರುಗಳಿದ್ದರೆ ವಿದ್ಯಾರ್ಥಿಗಳು ದೂರುಗಳನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗುವುದು. ಪ್ರತಿ ನಿತ್ಯ ವಿದ್ಯಾರ್ಥಿಗಳಿಗೆ ಮೆನುಚಾರ್ಟ್ ಅನುಸಾರ ಕಲ್ಪಿಸಲಾಗುವ ಭೋಜನಾ ವ್ಯವಸ್ಥೆಗೆ ಸಂಬಂಧಿಸಿದಂತೆ ನಿಲಯಮೇಲ್ವಿಚಾರಕರಿಂದ ಪೋಟೊಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
‘BBMP ಚುನಾವಣೆ’ ಬಗ್ಗೆ ಮಹತ್ವದ ಅಪ್ ಡೇಟ್ ಕೊಟ್ಟ ‘ಸಚಿವ ರಾಮಲಿಂಗಾರೆಡ್ಡಿ’ | BBMP Election
BREAKING: ಕುಡಿದ ಮತ್ತಿನಲ್ಲಿ ತನ್ನ ಮನೆಗೆ ತಾನೇ ಬೆಂಕಿಯಿಟ್ಟ ಕಿಡಿಗೇಡಿ