ವಿಜಯಪುರ : ಖ್ಯಾತ ಪ್ರವಚನಕಾರರು, ನಡೆದಾಡುವ ದೇವರಂದೆ ಇಡೀ ವಿಶ್ವದಾದ್ಯಂತ ಪ್ರಖ್ಯಾತಿಗೆ ಕಾರಣರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (82) ವಿಧಿವಶರಾಗಿದ್ದಾರೆ.
ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಇತ್ತೀಚೆಗೆ ಏರುಪೇರಾಗಿತ್ತು , ನಂತರ ಶ್ರೀಗಳಿಗೆ ಆಶ್ರಮದಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಿದ್ದೇಶ್ವರ ಸ್ವಾಮೀಜಿಗಳು ಇಂದು ವಿಧಿವಶರಾಗಿದ್ದಾರೆ.
ಶ್ರೀಗಳನ್ನು ನೋಡಲು ಆಶ್ರಮಕ್ಕೆ ರಾಜಕೀಯ ನಾಯಕರು, ವಿವಿಧ ಮಠದ ಸ್ವಾಮೀಜಿಗಳು, ಭಕ್ತರ ದಂಡೇ ಹರಿದು ಬರಿದು ಬಂದಿತ್ತು. ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಆಶ್ರಮದ ಆವರಣದಿಂದ ಭಕ್ತರನ್ನು ಹೊರಕ್ಕೆ ಕಳುಹಿಸಲಾಗಿತ್ತು. ಹಾಗೂ ಆಶ್ರಮದ ಸುತ್ತಮುತ್ತಾ ಭಾರೀ ಭದ್ರತೆ ಒದಗಿಸಲಾಗಿತ್ತು. ಶ್ರೀಗಳು ಬೇಗನೇ ಗುಣಮುಖರಾಗಲೆಂದು ಹಲವು ಕಡೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಆದರೆ ಭಕ್ತರ ಪ್ರಾರ್ಥನೆ ಫಲಿಸದೇ ‘ಸಿದ್ದೇಶ್ವರ ಸ್ವಾಮೀಜಿ’ಇಹಲೋಕ ತ್ಯಜಿಸಿದ್ದಾರೆ.
ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಹಿನ್ನೆಲೆ
ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಸಿ ಎರಡನೇ ವಿವೇಕಾನಂದ ಎನಿಸಿದ್ದಾರೆ.ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದರು. ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು.
ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಶಾಲೆಯಲ್ಲಿಯೇ ನಾಲ್ಕನೇ ತರಗತಿವರೆಗೆ ಓದಿದ ನಂತರ ಅವರು ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬಂದರು. ‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬಂತೆ ಬಾಲಕ ಸಿದ್ಧೇಶ್ವರನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಸಿದ್ಧೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು.
ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ಅಪಾರ ಗೌರವವಿದೆ. ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು. ಆದರೆ ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ಉದ್ದೇಶ ನನ್ನದು. ಹಾಗಾಗಿ ಪ್ರಶಸ್ತಿಗಳ ಅವಶ್ಯತೆಯು ನನಗಿಲ್ಲ. ಎಲ್ಲ ಗೌರವಾಧರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ಅನ್ಯಥಾ ಭಾವಿಸದಿರಿ ಎಂದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದರು.