ಪಟ್ನಾದ ಮುಸಲ್ಲಾಪುರ ಹ್ಯಾಟ್ ಬಳಿ ಇರುವ ಖ್ಯಾತ ಶಿಕ್ಷಕ ‘ಖಾನ್ ಸರ್’ ಅವರ ಕೋಚಿಂಗ್ ಸಂಸ್ಥೆಯ ಹೊರಗೆ ಮಂಗಳವಾರ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಎಸ್ಪಿ ಕಾರ್ತಿಕೇಯ ಕೆ. ಶರ್ಮಾ, “ಇದು ದೈಹಿಕ ಹಲ್ಲೆಗೆ ಸಂಬಂಧಿಸಿದ ಪ್ರಕರಣ. ಭದ್ರತಾ ಸಿಬ್ಬಂದಿಯೊಬ್ಬರಿಗೆ ಗಾಯಗಳಾಗಿವೆ ಎಂದು ವರದಿಯಾಗಿದ್ದು, ಅವರ ಮತ್ತು ಸ್ಥಳೀಯರ ಹೇಳಿಕೆಗಳನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಗಾಯಗೊಂಡ ವ್ಯಕ್ತಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ,” ಎಂದು ತಿಳಿಸಿದ್ದಾರೆ. ಘಟನೆಯ ನಂತರ ಪಟ್ನಾ ಎಸ್ಎಸ್ಪಿ, ಎಸ್ಪಿ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ದೌಡಾಯಿಸಿವೆ.
ದಾಳಿಯ ಹಿಂದೆ ಪ್ರತಿಸ್ಪರ್ಧಿಗಳ ಕೈವಾಡ ಎಂದು ಆರೋಪಿಸಿದ ಖಾನ್ ಸರ್
ಈ ಗುಂಡಿನ ದಾಳಿಯ ಹಿಂದೆ ಪ್ರತಿಸ್ಪರ್ಧಿ ಕೋಚಿಂಗ್ ಸೆಂಟರ್ನ ಕೈವಾಡವಿರಬಹುದು ಎಂದು ಖಾನ್ ಸರ್ ಅನುಮಾನ ವ್ಯಕ್ತಪಡಿಸಿದ್ದಾರೆ. “…ನಮ್ಮ ಮುಖ್ಯ ಸಮಸ್ಯೆ ಏನೆಂದರೆ, ನಾವು ಯಾಕೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿದ್ದೇವೆ? ನಮಗೆ ಯಾಕೆ ಇಷ್ಟು ದೊಡ್ಡ ಮಟ್ಟದ ಫಲಿತಾಂಶಗಳು ಬರುತ್ತಿವೆ? ಬಡವರಿಗೂ ಶಿಕ್ಷಣ ಪಡೆಯುವ ಹಕ್ಕಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಭದ್ರತೆಗೆ ಆದ್ಯತೆ ನೀಡಬೇಕೆಂದು ನಾವು ಆಡಳಿತಕ್ಕೆ ಮನವಿ ಮಾಡುತ್ತೇವೆ. ಸಾವಿರಾರು ಸಂಖ್ಯೆಯಲ್ಲಿ ಫಲಿತಾಂಶಗಳು ಬಂದಾಗ, ಕೆಲವು ಸಮಾಜಘಾತುಕ ಶಕ್ತಿಗಳಿಗೆ ಬೆದರಿಕೆ ಅನಿಸುತ್ತದೆ. ನಮ್ಮನ್ನು ಹತ್ತಿಕ್ಕಬಹುದು ಎಂದು ಅವರು ಭಾವಿಸುತ್ತಾರೆ,” ಎಂದು ಅವರು ಹೇಳಿದ್ದಾರೆ.
ದಾಳಿಕೋರರು ಕಚೇರಿಯನ್ನು “ಧ್ವಂಸಗೊಳಿಸಿದ್ದಾರೆ” ಎಂದು ಆರೋಪಿಸಿರುವ ಅವರು, “ರಕ್ಷಣೆ” ಕೋರಿದ್ದಾರೆ. “ದಾಳಿಕೋರರು ಕಚೇರಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ ಗುಂಡಿನ ದಾಳಿ ನಡೆಸಿದ್ದಾರೆ… ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ನಮ್ಮ ಭದ್ರತಾ ಸಿಬ್ಬಂದಿ ದಾಳಿಕೋರರನ್ನು ಗುರುತಿಸಿದ್ದಾರೆ – ಅವರು ಪಕ್ಕದ ಕೋಚಿಂಗ್ ಸೆಂಟರ್ನವರು. ನಮಗೆ ರಕ್ಷಣೆ ಬೇಕು; ಇದನ್ನು ಆಡಳಿತವೇ ನಿಭಾಯಿಸಬೇಕು… ಪಕ್ಕದ ಕೋಚಿಂಗ್ ಸಂಸ್ಥೆಯೇ ಇದರ ಹಿಂದೆ ಇದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ. ಅವರು ಖಾನ್ ಸರ್ ಅವರ ಕೋಚಿಂಗ್ ಸೆಂಟರ್ ಅನ್ನು ಸ್ಫೋಟಿಸುತ್ತೇವೆ ಎಂದು ಹೇಳಿಕೆಗಳನ್ನು ಕೂಡ ನೀಡಿದ್ದಾರೆ,” ಎಂದು ಅವರು ತಿಳಿಸಿದ್ದಾರೆ.








