ಚಾಮರಾಜನಗರ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಹೆಣ್ಣು ಮಗುವನ್ನು ಸಾಕಲು ಇಷ್ಟವಿಲ್ಲದೇ 50 ಸಾವಿರ ರೂ.ಗೆ ಮಾರಾಟ ಮಾಡಿದ್ದ ಘಟನೆ ಬೆಳಕಿಗೆ ಬಂದಿದ್ದು, ತಂದೆ, ತಾಯಿ ಸೇರಿ ಐವರನ್ನು ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ರಾಮಸಮುದ್ರ ಟೌನಿನ ಕುರುಬರ ಬೀದಿಯಲ್ಲಿ ವಾಸವಿದ್ದ ಸಿಂಧು ಮತ್ತು ಮಂಜುನಾಯಕ ಬಂಧಿತ ಪೋಷಕರಾಗಿದ್ದಾರೆ. ಜೊತೆಗೆ, ಮಧ್ಯವರ್ತಿಯಾಗಿದ್ದ ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ ಶಾಂತಾ, ಮಗು ಖರೀದಿ ಮಾಡಿದ್ದ ಹಾಸನದ ಅರಕಲಗೂಡು ತಾಲೂಕು ಕೋಣನೂರಿನ ಜವರಯ್ಯ ಮತ್ತು ನೇತ್ರಾ ದಂಪತಿ ಜೈಲು ಸೇರಿದ್ದಾರೆ.
ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಡಿ ಗ್ರೂಪ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಶಾಂತಾ ಮೂಲಕ ಹಾಸನದ ಕೊಣನೂರು ಗ್ರಾಮದ ಮಕ್ಕಳಿಲ್ಲದ ಜವರಯ್ಯ ಮತ್ತು ನೇತ್ರಾ ದಂಪತಿಗೆ 50 ಸಾವಿರ ರೂ.ಗೆ ಮಾರಾಟ ಮಾಡಿರುವುದಾಗಿ ತಿಳಿದುಬಂತು. ಬಳಿಕ ಸಿಂಧು ಮತ್ತು ಮಂಜುನಾಯಕ, ಶಾಂತ, ಜವರಯ್ಯ ಮತ್ತು ನೇತ್ರಾ ಅವರನ್ನು ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.








