ವಿಜಯಪುರ : ವಿಜಯಪುರದಲ್ಲಿ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆದ ಬೆನ್ನಲ್ಲೇ, ಕಿಡಿಗೇಡಿಗಳು ನಾಯಿಗಳಿಗೆ ವಿಷವಿಕ್ಕಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯಲ್ಲಿ ಒಂದು ನಾಯಿ ಸಾವನ್ನಪ್ಪಿದ್ದು, ಎರಡು ನಾಯಿಗಳು ಅಸ್ವಸ್ಥಗೊಂಡಿದ್ದು, ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಶಾಸ್ತ್ರಿ ನಗರದ ಜನ್ನತ್ ಹಾಲ್ ಬಳಿ ಬೀದಿ ನಾಯಿಗಳಿಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಆಹಾರದಲ್ಲಿ ವಿಷ ಬೆರೆಸಿ ನಾಯಿಗಳಿಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಷಪೂರಿತ ಆ ಆಹಾರ ಸೇವಿಸಿದ ಮೂರು ನಾಯಿಗಳ ಪೈಕಿ ಒಂದು ನಾಯಿ ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನೆರಡು ನಾಯಿಗಳು ಅಸ್ವಸ್ಥಗೊಂಡಿದ್ದು, ಪ್ರಾಣಿಪ್ರಿಯರು ಅವುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಈ ಘಟನೆಗೆ ಮುನ್ನ ವಿಜಯಪುರದ ರಾಜಕುಮಾರ್ ಲೇಔಟ್‌ನಲ್ಲಿ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಗಾಯಗೊಂಡ ಬಾಲಕನ ಘಟನೆ ನಗರಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಸಾರ್ವಜನಿಕರ ಒತ್ತಡದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಕೂಡ ಬೀದಿ ನಾಯಿಗಳ ಸ್ಥಳಾಂತರ ಕಾರ್ಯಕ್ಕೆ ಮುಂದಾಗಿತ್ತು. ಆದರೆ ಇದೇ ವೇಳೆ ನಗರದಲ್ಲಿ ಕೆಲ ದುಷ್ಕರ್ಮಿಗಳು ನಾಯಿಗಳಿಗೆ ವಿಷ ಹಾಕುತ್ತಿರುವ ಆರೋಪ ಕೇಳಿಬಂದಿದೆ.








