ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಆಟವಾಡುತ್ತಿದ್ದ 11 ತಿಂಗಳ ಮಗು ಆಕಸ್ಮಿಕವಾಗಿ ನೀರಿನ ಬಕೆಟ್‌ಗೆ ಬಿದ್ದು ಸಾವನ್ನಪ್ಪಿದ್ದು, ಮಗುವಿನ ಸಾವಿನಿಂದ ಮರುಗಿದ ತಾಯಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ಸಂಭವಿಸಿದೆ.
ಘಟನೆಯ ಹಿನ್ನೆಲೆ:
ಮೃತ ತಾಯಿಯನ್ನು ಪ್ರತಿಭಾ (29) ಎಂದು ಗುರುತಿಸಲಾಗಿದೆ. ಇವರು ಮತ್ತು ಪತಿ ಮಹಾಂತೇಶ್ ಇಬ್ಬರೂ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದರು. ಮಗು ಅಗಸ್ತ್ಯ (11 ತಿಂಗಳು) ಮನೆಯಲ್ಲಿ ಆಟವಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ನಡೆದಿದ್ದೇನು?
ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ಪ್ರತಿಭಾ ಮತ್ತು ಮಗು ಮಾತ್ರ ಇದ್ದರು. ಪತಿ ಮಹಾಂತೇಶ್ ಕೆಲಸದ ನಿಮಿತ್ತ ಹೊರಹೋಗಿದ್ದರು.
ಪ್ರತಿಭಾ ಅವರು ಒಣಗಿದ ಬಟ್ಟೆಗಳನ್ನು ತರಲು ಹೋದ ಸಂದರ್ಭದಲ್ಲಿ, ಮಗು ಅಗಸ್ತ್ಯ ತೆವಳುತ್ತಾ ಬಾತ್‌ರೂಮ್‌ಗೆ ಹೋಗಿದೆ.
ಅಲ್ಲಿ ನೀರಿನಿಂದ ತುಂಬಿದ್ದ ಬಕೆಟ್‌ನಲ್ಲಿ ಮಗು ಆಕಸ್ಮಿಕವಾಗಿ ತಲೆಕೆಳಗಾಗಿ ಬಿದ್ದಿದ್ದು, ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದೆ.
ಡೆತ್ ನೋಟ್ ಬರೆದಿಟ್ಟು ತಾಯಿ ಆತ್ಮಹತ್ಯೆ:
ಬಟ್ಟೆ ತರಲು ಹೋಗಿ ವಾಪಸ್ ಬಂದ ತಾಯಿಗೆ ಮಗು ನೀರಿನ ಬಕೆಟ್‌ನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಮಗುವನ್ನು ಹೊರತೆಗೆದರೂ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು. ತನ್ನ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂಬ ತೀವ್ರ ಅಪರಾಧ ಪ್ರಜ್ಞೆ ಮತ್ತು ಮಗುವಿನ ವಿಯೋಗ ತಾಳಲಾರದೆ ಪ್ರತಿಭಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡೆತ್ ನೋಟ್‌ನಲ್ಲಿ ಏನಿದೆ?
“ನಾನು ಬಟ್ಟೆ ತರಲು ಹೋದಾಗ ಈ ಘಟನೆ ನಡೆಯಿತು. ಮಗುವಿನ ಸಾವಿಗೆ ನಾನೇ ಕಾರಣ, ಹಾಗಾಗಿ ನಾನು ಬದುಕಿರಲು ಇಚ್ಛಿಸುವುದಿಲ್ಲ” ಎಂದು ಪ್ರತಿಭಾ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಸಾವಿಗೂ ಮುನ್ನ ನಡೆಸಿದ ಹರಸಾಹಸ:
ಘಟನಾ ಸ್ಥಳದಲ್ಲಿ 15 ಮಾತ್ರೆಗಳ ಖಾಲಿ ಶೀಟ್ ಪತ್ತೆಯಾಗಿದ್ದು, ಪ್ರತಿಭಾ ಅವರು ಮೊದಲು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಕೈ ಕುಯ್ದುಕೊಂಡು ಪ್ರಾಣ ಬಿಡಲು ಯತ್ನಿಸಿದ್ದಾರೆ. ಆದರೆ ರಕ್ತ ಹೆಚ್ಚಾಗಿ ಬಾರದ ಕಾರಣ, ಅಂತಿಮವಾಗಿ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಕೆಲಸ ಮುಗಿಸಿ ಮನೆಗೆ ಮರಳಿದ ಪತಿ ಮಹಾಂತೇಶ್‌ಗೆ ಹೆಂಡತಿ ಮತ್ತು ಮಗು ಇಬ್ಬರೂ ಶವವಾಗಿ ಕಂಡುಬಂದಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಚಂದ್ರಾ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.







