ಮಂಗಳೂರು : ಮಂಗಳೂರಿನಲ್ಲಿ ಪೊಲೀಸರ ಸಮಯ ಪ್ರಜ್ಞೆಯಿಂದ ಎರಡು ಜೀವಗಳು ಉಳಿದಿದ್ದು, ಹೆತ್ತ ಮಗುವಿನೊಂದಿಗೆ ತಂದೆಯೊಬ್ಬ ಆತ್ಮಹತ್ಯೆಗೆ ಯತ್ನಿಸುತ್ತಿದ್ದ. ಆದರೆ ಸರಿಯಾದ ಸಮಯಕ್ಕೆ ಪೊಲೀಸರು ಆಗಮಿಸಿ ತಂದೆ ಮತ್ತು ಮಗುವಿನ ಜೀವ ಉಳಿಸಿರುವ ಘಟನೆ ಮಂಗಳೂರಿನ ಪಣಂಬೂರು ಎಂಬಲ್ಲಿ ನಡೆದಿದೆ.
ಕಾವೂರು ಠಾಣಾ ವ್ಯಾಪ್ತಿಯ ಅಂಬಿಕಾನಗರದ 35 ವರ್ಷದ ನಿವಾಸಿಯೊಬ್ಬರು ತಮ್ಮ ಮಗುವಿನೊಂದಿಗೆ ಮಂಗಳವಾರ ಸಂಜೆ ಪಣಂಬೂರು ಸಮುದ್ರ ತೀರಕ್ಕೆ ಬಂದಿದ್ದರು. ಬಳಿಕ ಮಗುವಿನೊಂದಿಗೆ ‘ನಾವಿಬ್ಬರೂ ಸಾಯೋಣ’ ಎಂದು ಹೇಳುತ್ತಾ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಅವರು ತನ್ನ ಅಕ್ಕನಿಗೆ ಕಳುಹಿಸಿದ್ದರು. ಬಳಿಕ ಅವರು ಅದನ್ನು ಪೊಲೀಸರಿಗೆ ಕಳುಹಿಸಿದ್ದರು. ಈ ವಿಡಿಯೋ ಗಮನಿಸಿದ ಬಳಿಕ ಪಣಂಬೂರು ಪೊಲೀಸರು ಬೀಚ್‌ನಲ್ಲಿ ಎಲ್ಲಾ ಕಡೆ ತಂದೆ, ಮಗುವನ್ನು ಹುಡುಕಾಡಿದ್ದಾರೆ.
ಆದರೆ ಅಲ್ಲಿ ಅವರು ಸಿಗದಿದ್ದ ಕಾರಣ ಆತನ ಮನೆಯನ್ನು ಹುಡುಕಾಡಿ ಮನೆಯತ್ತ ಬಂದಿದ್ದಾರೆ. ಪಣಂಬೂರು ಪೊಲೀಸರು ಮನೆಗೆ ಬಂದಾಗ ವ್ಯಕ್ತಿಯು ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದ. ಅದೇ ಸಮಯದಲ್ಲಿ ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬಾಗಿಲು ಮುರಿದು ಆತ ಹಾಗೂ ಪುತ್ರಿಯನ್ನು ರಕ್ಷಿಸಿದ್ದಾರೆ. ಬಳಿಕ ಇಬ್ಬರನ್ನೂ ಕಾವೂರು ಠಾಣೆಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಆತನಿಗೆ ತಿಳಿಹೇಳಿ ಮನೆಗೆ ಕಳುಹಿಸಿದ್ದಾರೆ.








