ಇಂದೋರ್:ಮಧ್ಯಪ್ರದೇಶದ ಇಂದೋರ್‌ನಲ್ಲಿ ನಂಬಲಾಗದ ಘಟನೆಯೊಂದು ನಡೆದಿದೆ. ಆಟವಾಡುತ್ತಾ ನಗುತ್ತಿದ್ದ ಮಗುವಿನ ಗಂಟಲಿನಲ್ಲಿ ಬದುಕಿದ್ದ ಮೀನೊಂದು ಸಿಲುಕಿಕೊಂಡಿದ್ದು, ಬಾಲಕ ಸಾವಿನ ದವಡೆಗೆ ಸಿಲುಕಿದ್ದನು. ಆದರೆ, ಇಂದೋರ್‌ನ ಎಂವೈಹೆಚ್ (MYH) ಆಸ್ಪತ್ರೆಯ ವೈದ್ಯರು ಅತ್ಯಂತ ಜಾಣ್ಮೆಯಿಂದ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಈ ಬಾಲಕ ಮೀನುಗಾರಿಕೆ ನಡೆಯುತ್ತಿದ್ದ ಕೆರೆಯ ಬಳಿ ಆಟವಾಡುತ್ತಿದ್ದನು. ಈ ವೇಳೆ ಮೀನು ಹಿಡಿದು ಬಾಲಕನಿಗೆ ತೋರಿಸಿದಾಗ, ಆತ ಆಶ್ಚರ್ಯದಿಂದ ನಗಲು ಶುರು ಮಾಡಿದ್ದಾನೆ. ಮಗು ಬಾಯಿ ತೆರೆದಿದ್ದನ್ನು ಕಂಡ ಬದುಕಿದ್ದ ಮೀನು ನೇರವಾಗಿ ಮಗುವಿನ ಗಂಟಲಿಗೆ ಜಿಗಿದು ಒಳಗೆ ಸಿಲುಕಿಕೊಂಡಿದೆ.
ಮೀನು ಮಗುವಿನ ಗಂಟಲಿನಲ್ಲಿ ಎಷ್ಟು ಭದ್ರವಾಗಿ ಸಿಲುಕಿತ್ತೆಂದರೆ, ಅದು ಉಸಿರಾಟದ ನಳಿಕೆಗೆ ಅಡ್ಡಿಪಡಿಸುತ್ತಿತ್ತು. ಇದರಿಂದ ಮಗುವಿಗೆ ಉಸಿರಾಟ ತೊಂದರೆಯಾಗಿ ಕ್ಷಣಾರ್ಧದಲ್ಲಿ ಪ್ರಾಣಕ್ಕೆ ಕುತ್ತು ಬಂದಿತ್ತು.
ತಕ್ಷಣವೇ ಮಗುವನ್ನು ಎಂವೈಹೆಚ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ತಂಡವು ಯಾವುದೇ ವಿಳಂಬ ಮಾಡದೆ ಎಂಡೋಸ್ಕೋಪಿ ಮೂಲಕ ಮೀನನ್ನು ಗಂಟಲಿನಿಂದ ಹೊರತೆಗೆಯಲು ಯಶಸ್ವಿಯಾದರು. ಮೀನು ಹೊರಬಂದಾಗಲೂ ಅದು ಬದುಕಿತ್ತು ಎಂಬುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಸದ್ಯ ಮಗು ಅಪಾಯದಿಂದ ಪಾರಾಗಿದ್ದು, ವೈದ್ಯರ ವೀಕ್ಷಣೆಯಲ್ಲಿದೆ. ಸರಿಯಾದ ಸಮಯಕ್ಕೆ ಮಗುವನ್ನು ಆಸ್ಪತ್ರೆಗೆ ತಂದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.








