ಮುಂಬೈ : ಸಾಮಾನ್ಯವಾಗಿ ಊಟ ಆದ್ಮೇಲೆ ಜೀರ್ಣ ಕ್ರೀಯೇ ಅಗಲಿ ಎಂದು ಬಾಳೆ ಹಣ್ಣು ಸೇವಿಸುತ್ತಾರೆ. ಆದರೆ ಊಟ ಆದ್ಮೇಲೆ ಕಲ್ಲಂಗಡಿ ಹಣ್ಣು ತಿಂದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಮುಂಬೈಯಲ್ಲಿ ಬಿರಿಯಾನಿ ಸೇವಿಸಿದ ಬಳಿಕ ಕಲ್ಲಂಗಡಿ ತಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೆ ನಿಖರ ಕಾರಣ ಏನು ಎನ್ನುವುದನ್ನು ಪತ್ತೆ ಹಚ್ಚಲು ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ಕಳುಹಿಸಲಾಗಿದೆ. ಈ ಪ್ರಕರಣದ ಬೆನ್ನಲ್ಲೇ ಆರೋಗ್ಯ ತಜ್ಞರು ಊಟ ಮಾಡಿದ ನಂತರ ಕಲ್ಲಂಗಡಿ ಸೇವಿಸಬಾರದು ಎಂದು ಸಲಹೆ ನೀಡುತ್ತಿದ್ದಾರೆ. ಊಟ ಮಾಡಿದ ತಕ್ಷಣ ಕಲ್ಲಂಗಡಿ ಹಣ್ಣನ್ನು ತಿನ್ನುವುದು ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು.
ಆಯುರ್ವೇದದ ಪ್ರಕಾರ, ಕೆಲವು ಆಹಾರಗಳನ್ನು ಕಲ್ಲಂಗಡಿಯೊಂದಿಗೆ ಸೇರಿಸುವುದು ದೇಹದಲ್ಲಿ ವಿಷಕಾರಿ ಅಂಶಗಳನ್ನು ಉತ್ಪತ್ತಿ ಮಾಡುವ ಸಾಧ್ಯತೆ ಇರುತ್ತದೆ. ಕಲ್ಲಂಗಡಿ ಹಣ್ಣು ಹೊಟ್ಟೆಯಲ್ಲಿ ತುಂಬಾ ಬೇಗ (ಸುಮಾರು 20-30 ನಿಮಿಷದಲ್ಲಿ) ಜೀರ್ಣವಾಗುತ್ತದೆ. ಆದರೆ ನಾವು ತಿಂದ ಊಟ (ಅನ್ನ, ರೊಟ್ಟಿ) ಜೀರ್ಣವಾಗಲು 2-3 ಗಂಟೆ ಬೇಕು. ಊಟದ ನಂತರ ಹಣ್ಣು ತಿಂದರೆ ಅದು ಊಟದ ಜೊತೆ ಸಿಕ್ಕಿಕೊಳ್ಳುತ್ತದೆ. ಇದರಿಂದ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಉಂಟಾಗುತ್ತದೆ.
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ದೇಹಕ್ಕೆ ತಂಪು ನೀಡುತ್ತದೆ. ಆದರೆ ನಾವು ಊಟ ಮಾಡಿದಾಗ ಆಹಾರವನ್ನು ಜೀರ್ಣಿಸಲು ನಮ್ಮ ಹೊಟ್ಟೆಯಲ್ಲಿ ಜಠರಾಗ್ನಿ (ಉಷ್ಣತೆ) ಹೆಚ್ಚಾಗಿರುತ್ತದೆ. ತಕ್ಷಣ ತಣ್ಣಗಿನ ಕಲ್ಲಂಗಡಿ ತಿಂದರೆ ಆ ಜೀರ್ಣ ಪ್ರಕ್ರಿಯೆ ನಿಧಾನವಾಗಿ ಅಜೀರ್ಣವಾಗುತ್ತದೆ. ಊಟದ ಜೊತೆಗೆ ಅಥವಾ ತಕ್ಷಣ ಕಲ್ಲಂಗಡಿ ತಿಂದರೆ ದೇಹವು ಆಹಾರದಲ್ಲಿನ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಲ್ಲಂಗಡಿ ತಿಂದ ತಕ್ಷಣ ಹಾಲು ಕುಡಿಯುವುದು ಅಥವಾ ಮೊಸರು ತಿನ್ನುವುದು ಜೀರ್ಣಕ್ರಿಯೆಗೆ ವಿರುದ್ಧವಾಗಿರುತ್ತದೆ.
1. ಜೀರ್ಣಕ್ರಿಯೆಯ ಸಮಸ್ಯೆಗಳು
ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೀನ್ (Lycopene) ಎಂಬ ಅಂಶ ಹೇರಳವಾಗಿದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬರ, ಗ್ಯಾಸ್, ಅತಿಸಾರ (Diarrhea) ಮತ್ತು ವಾಕರಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
2. ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆ
ಕಲ್ಲಂಗಡಿ ಹಣ್ಣಿನ ಗ್ಲೈಸೆಮಿಕ್ ಇಂಡೆಕ್ಸ್ (GI) ಹೆಚ್ಚಾಗಿರುತ್ತದೆ (ಸುಮಾರು 72). ಆದ್ದರಿಂದ, ಮಧುಮೇಹ ಇರುವವರು ಇದನ್ನು ಅತಿಯಾಗಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ವೇಗವಾಗಿ ಏರಿಕೆಯಾಗುವ ಸಾಧ್ಯತೆ ಇರುತ್ತದೆ.
3. ಹೈಪರ್ಕೆಲೆಮಿಯಾ (Hyperkalemia)
ಇದರಲ್ಲಿ ಪೊಟ್ಯಾಸಿಯಮ್ ಅಂಶವು ಉತ್ತಮ ಪ್ರಮಾಣದಲ್ಲಿದೆ. ಆದರೆ ಅತಿಯಾದ ಸೇವನೆಯಿಂದ ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟ ಹೆಚ್ಚಾಗಿ, ಹೃದಯ ಬಡಿತದಲ್ಲಿ ಏರುಪೇರು ಅಥವಾ ಸ್ನಾಯುಗಳ ದೌರ್ಬಲ್ಯ ಉಂಟಾಗಬಹುದು. ಇದನ್ನು ‘ಹೈಪರ್ಕೆಲೆಮಿಯಾ’ ಎಂದು ಕರೆಯಲಾಗುತ್ತದೆ.
4. ಕಿಡ್ನಿ ಸಮಸ್ಯೆ ಇರುವವರಿಗೆ ಎಚ್ಚರಿಕೆ
ಹೆಚ್ಚಿನ ಪ್ರಮಾಣದ ನೀರು ಮತ್ತು ಪೊಟ್ಯಾಸಿಯಮ್ ಅನ್ನು ಹೊರಹಾಕಲು ಕಿಡ್ನಿಗಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಕಿಡ್ನಿ ಸಂಬಂಧಿತ ಕಾಯಿಲೆ ಇರುವವರು ವೈದ್ಯರ ಸಲಹೆಯಂತೆ ಇದನ್ನು ಮಿತವಾಗಿ ಸೇವಿಸುವುದು ಉತ್ತಮ.
5. ಜಲದಂಶದ ಅತಿಯಾದ ಸಂಗ್ರಹ (Over-hydration)
ಕಲ್ಲಂಗಡಿ ಹಣ್ಣಿನಲ್ಲಿ 90% ಕ್ಕಿಂತ ಹೆಚ್ಚು ನೀರಿರುತ್ತದೆ. ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ವಿಪರೀತವಾಗಿ ಹೆಚ್ಚಾಗಿ, ಸೋಡಿಯಂ ಮಟ್ಟ ಕಡಿಮೆಯಾಗಬಹುದು (Water Intoxication).








