ಧಾರವಾಡ : ಪತ್ನಿ ಕಿರುಕುಳಕ್ಕೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದ್ದು, ಧಾರವಾಡದಲ್ಲಿ ಡೆತ್ ನೋಟ್ ಬರೆದಿದ್ದು, ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ವ್ಯಕ್ತಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಪತಿಯನ್ನು ಶಿವರಾಜ್ ಎತ್ತಿನಗುಡ್ಡ (35) ಎಂದು ತಿಳಿದುಬಂದಿದೆ. ಕಳೆದ ನವೆಂಬರ್ 16ರಂದು ಶಿವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೊದಲಿಗೆ ಗರಗ ಪೊಲೀಸರು ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಡೆತ್‌ನೋಟ್ ಶಿವರಾಜನೇ ಬರೆದಿದ್ದು ಎಂದು ಎಫ್‌ಎಸ್‌ಎಲ್ ವರದಿ ಬಂದ ಹಿನ್ನೆಲೆಯಲ್ಲಿ ಪತ್ನಿಯೇ ಸಾವಿಗೆ ಕಾರಣ ಎಂದು ಗರಗ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.
ಶಿವರಾಜ್ ಎತ್ತಿನಗುಡ್ಡ ಕಳೆದ 2024 ರ ಜುಲೈನಲ್ಲಿ ಮದುವೆಯಾಗಿದ್ದರು. ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಹೈಸ್ಕೂಲ್ ಶಿಕ್ಷಕಿ ಯಲ್ಲವ್ವ ಬೆಂಗೇರಿ ಎಂಬುವವಳ ಜೊತೆ ಮದುವೆಯಾಗಿದ್ದರು.ಮದುವೆಯಾದ 15 ದಿನದಲ್ಲೇ ಯಲ್ಲವ್ವ ಪೋಷಕರ ಮನೆಗೆ ಹೋಗಿದ್ದರು. ಶಿವರಾಜ್ ಆಗ ಪತ್ನಿಗೆ ಮನೆಗೆ ಕರೆ ತರಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಧಾರವಾಡದಲ್ಲಿ ಬೇರೆ ಮನೆ ಮಾಡಿದರೆ ಮಾತ್ರ ನಾನು ವಾಪಸ್ ಬರುತ್ತೇನೆ ಎಂದು ಯಲ್ಲವ್ವ ಹೇಳಿದ್ದರು.
ಮನೆ ಬೇರೆ ಮಾಡಿದರೂ ಪತ್ನಿ ಬರಲೇ ಇಲ್ಲ. ಹೀಗಾಗಿ ನನ್ನ ಸಾವಿಗೆ ಪತ್ನಿ ಕಾರಣ, ನನ್ನ ಸಾವಿನ ನಂತರ ಆಕೆಗೆ ಶಿಕ್ಷೆಯಾಗಲಿ ಎಂದು ಶಿವರಾಜ್ ಡೆತ್ ನೋಟ್ ಬರೆದಿಟ್ಟಿದ್ದರು. ಮದುವೆಯ ನಂತರ ಯಲ್ಲವ್ವ ಸರಿಯಾಗಿ ಜೀವನ ನಡೆಸದೇ ಶಿವರಾಜ್‌ನನ್ನ ಬಿಟ್ಟು ಪೋಷಕರ ಮನೆಗೆ ಹೋಗಿದ್ದರು. ಆಸ್ತಿಗಾಗಿ ನನ್ನ ಸಹೋದರನಿಗೆ ಕಿರುಕುಳ ಕೊಟ್ಟಿದ್ದಕ್ಕೆ ಆತ ನೇಣು ಹಾಕಿಕೊಂಡಿದ್ದಾನೆ ಎಂದು ಮೃತ ಶಿವರಾಜ್ ಸಜೋದರಿಯರು ಆರೋಪಿಸಿದ್ದಾರೆ.