ಹುಬ್ಬಳ್ಳಿ : ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೃದಯಾಘಾತ ಅನ್ನೋದು ಸಾಮಾನ್ಯ ಕಾಯಿಲೆಯಾಗಿದೆ. ಇದೀಗ ಬಟ್ಟೆ ಅಂಗಡಿ ಸಿಬ್ಬಂದಿಯೊಬ್ಬ ಗ್ರಾಹಕರಿಗೆ ಬಟ್ಟೆ ತೋರಿಸುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು ಹುಬ್ಬಳ್ಳಿಯ ಕಂಚಗಾರ ಗಲ್ಲಿಯ ಎನ್.ಆರ್.ಸಾರಿ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ರಾಜಸ್ಥಾನ ಮೂಲದ ಭವರ್ ಸಿಂಗ್ (43) ಎಂದು ಗುರುತಿಸಲಾಗಿದೆ. ನಗರದ ಕಂಚಗಾರ ಗಲ್ಲಿಯಲ್ಲಿರುವ ಎನ್ಆರ್ ಸಾರಿ ಸೆಂಟರ್ನಲ್ಲಿ ಗ್ರಾಹಕರಿಗೆ ಬಟ್ಟೆ ತೋರಿಸುವಾಗ ಏಕಾಏಕಿ ಕೂತಲ್ಲೇ ಕುಸಿದು ಬಿದ್ದಿದ್ದಾರೆ.
ತಕ್ಷಣ ಇನ್ನೋರ್ವ ಸಿಬ್ಬಂದಿ ಆತನನ್ನು ಮೇಲಕೆತ್ತಲು ಯತ್ನಿಸಿದರೂ ಎಚ್ಚರಗೊಂಡಿಲ್ಲ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆಗೆ ದಾಖಲಿಸುವ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.