ಮಂಡ್ಯ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂನಲ್ಲಿ ಭಾನುವಾರ ತಡರಾತ್ರಿ ಭೀಕರ ಕೊಲೆಯೊಂದು ನಡೆದಿದ್ದು, ಸಕ್ಕರೆ ನಾಡಿನ ಜನತೆಯನ್ನು ಬೆಚ್ಚಿಬೀಳಿಸಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ಕಡಿದು ಹತ್ಯೆ ಮಾಡಿದೆ.
ಘಟನೆಯ ವಿವರ:
ಮೈಸೂರು ಮೂಲದ ಮಹಮ್ಮದ್ ಸೋಹೇದ್ (27) ಕೊಲೆಯಾದ ದುರ್ದೈವಿ. ಬೈಕಿನಲ್ಲಿ ತೆರಳುತ್ತಿದ್ದ ಸೋಹೇದ್ನನ್ನು ನಾಲ್ಕೈದು ಮಂದಿ ಕಿರಾತಕರ ತಂಡ ಬೈಕ್ಗಳಲ್ಲಿ ಹಿಂಬಾಲಿಸಿಕೊಂಡು ಬಂದಿದೆ. ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಗಂಜಾಂ ತಲುಪುತ್ತಿದ್ದಂತೆ ಅಡ್ಡಗಟ್ಟಿದ ಹಂತಕರು, ಲಾಂಗು ಮತ್ತು ಮಚ್ಚುಗಳಿಂದ ಮನಬಂದಂತೆ ದಾಳಿ ನಡೆಸಿದ್ದಾರೆ.
ಪ್ರಾಣ ಉಳಿಸಿಕೊಳ್ಳಲು ಸೋಹೇದ್ ಓಡಲು ಯತ್ನಿಸಿದರೂ ಬಿಡದ ಹಂತಕರು, ಸಾರ್ವಜನಿಕವಾಗಿಯೇ ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿದ ಬಳಿಕ ಹಂತಕರು ತಾವು ತಂದಿದ್ದ ಮಾರಾಕಾಸ್ತ್ರಗಳನ್ನು ಘಟನಾ ಸ್ಥಳದಲ್ಲೇ ಬಿಸಾಡಿ ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಕುರಿತು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.








