ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು,ಕಬ್ಬಿನ ಗದ್ದೆಗೆ ಎಳೆದೊಯ್ದು ಏಳನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪದ ಅಮಾನವೀಯ ಘಟನೆ ಜಿಲ್ಲೆಯ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನವೆಂಬರ್ 23ರಂದೇ ಬಾಲಕಿ ಮೇಲೆ ಅತ್ಯಾಚಾರ ಆಗಿದ್ದು, ಬಾಲಕಿ ಕುಟುಂಬಸ್ಥರಿಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದ ಹಿನ್ನೆಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಿಟ್ಟುಬೀಸಲು ಗಿರಣಿಗೆ ತೆರಳಿದ್ದ ವೇಳೆ ಬಾಲಕಿಯನ್ನು ಹೊತ್ತೊಯ್ದು ಆರೋಪಿಗಳಾದ ಮಣಿಕಂಠ ದಿನ್ನಿಮನಿ ಮತ್ತು ಈರಣ್ಣ ಸಂಕಮ್ಮನವರ ಅತ್ಯಾಚಾರ ಎಸಗಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಎಸ್ಪಿ ಕೂಡಾ ಮಾತನಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮನೆಯಿಂದ ಕೇವಲ 300 ಮೀಟರ್ ಅಂತರದಲ್ಲಿರುವ ಹಿಟ್ಟಿನ ಗಿರಣಿಗೆ ಹಿಟ್ಟು ರುಬ್ಬಿಸಿಕೊಂಡು ಬರಲು ಸಂತ್ರಸ್ತ ಬಾಲಕಿ ತೆರಳಿದ್ದಳು. ಈ ವೇಳೆ ಆಕೆಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ನಿನ್ನೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಮುರಗೋಡ ಪೊಲೀಸರು ಮಾಹಿತಿ ನೀಡಿದ್ದಾರೆ.








