ಮುಂಬೈ: ಮಹಾರಾಷ್ಟ್ರದ ಪುಣೆ ಮತ್ತು ಪಿಂಪ್ರಿ-ಚಿಂಚವಡದಲ್ಲಿ ಕಳ್ಳಭಟ್ಟಿ (ವಿಷಪೂರಿತ ಮದ್ಯ) ಸೇವಿಸಿ ಕಳೆದ 48 ಗಂಟೆಗಳಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಇನ್ನು ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಅಸ್ವಸ್ಥಗೊಂಡವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ವೈದ್ಯರು ಅವರ ಪ್ರಾಣ ಉಳಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.
ಎಲ್ಲೆಲ್ಲಿ ಎಷ್ಟು ಸಾವು?
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸಾವಿನ ವಿವರ ಹೀಗಿದೆ:
ಪಿಂಪ್ರಿ-ಚಿಂಚವಡ (ಫುಗೇವಾಡಿ ಮತ್ತು ದಾಪೋಡಿ ಪ್ರದೇಶ): 13 ಸಾವು
ಪುಣೆ (ಕಾಲೆ ಪಡಲ್ ಪ್ರದೇಶ): 03 ಸಾವು
ಹಡಪ್ಸರ್ ಪ್ರದೇಶ: 02 ಸಾವು
ಮುಖ್ಯ ಆರೋಪಿ ಬಂಧನ
ದುರಂತದ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿರುವ ಪೊಲೀಸರು, ಈ ಅಕ್ರಮ ದಂಧೆಯ ಮುಖ್ಯ ಸೂತ್ರಧಾರಿ ಯೋಗೇಶ್ ಗಾಯಕ್ವಾಡ್ ಎಂಬಾತನನ್ನು ಬಂಧಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಈತ ದೀರ್ಘಕಾಲದಿಂದ ಈ ಭಾಗದಲ್ಲಿ ಅಕ್ರಮ ಹಾಗೂ ವಿಷಪೂರಿತ ಮದ್ಯ ಸರಬರಾಜು ಮಾಡುತ್ತಿದ್ದ. ಈ ಜಾಲದ ಹಿಂದೆ ಇರುವ ಇತರ ಪ್ರಮುಖರನ್ನು ಪತ್ತೆಹಚ್ಚಲು ಪೊಲೀಸರ ಹಲವು ತಂಡಗಳು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿವೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತೀವ್ರ ಸಂತಾಪ
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ಘಟನೆಗೆ ತೀವ್ರ ಕಳವಳ ಮತ್ತು ದುಃಖ ವ್ಯಕ್ತಪಡಿಸಿದ್ದು, ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.ಈ ಅಕ್ರಮ ದಂಧೆ ಮತ್ತು ನಿರ್ಲಕ್ಷ್ಯದಲ್ಲಿ ಭಾಗಿಯಾಗಿರುವ ಯಾವುದೇ ದೋಷಿಗಳನ್ನು ಬಿಡುವುದಿಲ್ಲ. ಅವರು ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರೂ ಅಥವಾ ಆಡಳಿತ ಅಧಿಕಾರಿಯಾಗಿದ್ದರೂ ಕಠಿಣ ಶಿಕ್ಷೆ ಖಚಿತ,” ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ. ಸಂತ್ರಸ್ತರಿಗೆ ತಕ್ಷಣವೇ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ನೀಡುವಂತೆ ಅವರು ಸ್ಥಳೀಯ ಆಡಳಿತಕ್ಕೆ ಸೂಚಿಸಿದ್ದಾರೆ.








