ಮಂಡ್ಯ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭ್ರೂಣ ಲಿಂಗ ಪತ್ತೆ ಮತ್ತು ಬಾಲ ಗರ್ಭಿಣಿಯರ ವಿಚಾರವಾಗಿ ಸಂಚಲನ ಮೂಡುತ್ತಿದೆ. ಇತ್ತೀಚೆಗಷ್ಟೇ ಅಕ್ರಮ ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿ ನಡೆಸಿ ಮೂವರು ವೈದ್ಯರನ್ನು ಬಂಧಿಸಿದ ಬೆನ್ನಲ್ಲೇ, ಮತ್ತೊಂದು ಕಹಿಸತ್ಯ ಹೊರಬಿದ್ದಿದೆ. ಕಳೆದ ಐದು ವರ್ಷಗಳಲ್ಲಿ ಮಂಡ್ಯ ಜಿಲ್ಲೆಯೊಂದರಲ್ಲೇ ಬರೊಬ್ಬರಿ 1,354 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿರುವುದು ಜಿಲ್ಲಾಡಳಿತವನ್ನು ಬೆಚ್ಚಿಬೀಳಿಸಿದೆ.
ಕಳೆದ ಐದು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದಾಗ, 18 ವರ್ಷಕ್ಕಿಂತ ಕೆಳಗಿನ ಹೆಣ್ಣುಮಕ್ಕಳು ಗರ್ಭಧರಿಸುತ್ತಿರುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವುದು ಕಂಡುಬಂದಿದೆ. ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವರದಿಗಳ ಪ್ರಕಾರ, ಗ್ರಾಮೀಣ ಭಾಗಗಳಲ್ಲಿ ಈ ಪ್ರಮಾಣ ಹೆಚ್ಚಿದೆ. ಬಾಲ್ಯ ವಿವಾಹ ಮತ್ತು ಜಾಗೃತಿಯ ಕೊರತೆಯೇ ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಇತ್ತೀಚೆಗೆ ಕೆಆರ್ ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಮತ್ತಷ್ಟು ಆಘಾತಕಾರಿ ವಿಷಯಗಳು ಹೊರಬಂದಿವೆ. ಈ ಕೇಂದ್ರಗಳಲ್ಲಿ ನಿಯಮ ಬಾಹಿರವಾಗಿ 31 ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ನಡೆಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಸ್ಕ್ಯಾನಿಂಗ್ ದಂಧೆಯ ಜಾಲ ಎಷ್ಟು ಆಳವಾಗಿ ಹರಡಿದೆ ಎಂಬುದು ಸಾಬೀತಾಗಿದೆ.
ವರದಿಯಾಗಿರುವ 1,354 ಪ್ರಕರಣಗಳ ಪೈಕಿ ಪೋಕ್ಸೋ (POCSO) ಕೇಸ್ಗಳ ಸಂಖ್ಯೆ ಕೇವಲ ಕೇವಲ 674. ಅಂದರೆ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿಲ್ಲ ಎಂಬ ಕಹಿ ಸತ್ಯ ಬಯಲಾಗಿದೆ. ಬಾಲ್ಯ ವಿವಾಹ, ಪ್ರೀತಿಯ ಜಾಲ, ಮತ್ತು ಲೈಂಗಿಕ ದೌರ್ಜನ್ಯದಂತಹ ಕಾರಣಗಳಿಂದಾಗಿ 14 ರಿಂದ 18 ವರ್ಷದೊಳಗಿನ ಬಾಲಕಿಯರು ಗರ್ಭಿಣಿಯರಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.








