ಬೆಂಗಳೂರು: ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಸೇವನೆ ಎಂಬ ಹೆಮ್ಮಾರಿ ರಾಜ್ಯದಲ್ಲಿ ಸದ್ದಿಲ್ಲದೆ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಕಳೆದ ಕೇವಲ ಒಂದು ವರ್ಷದಲ್ಲೇ ಕರ್ನಾಟಕದಲ್ಲಿ ತಂಬಾಕು ಮತ್ತು ಧೂಮಪಾನದ ಚಟಕ್ಕೆ ಸಿಲುಕಿ ಬರೋಬ್ಬರಿ 10,000 ಕ್ಕೂ ಹೆಚ್ಚು ಜನರು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂಬ ಕಹಿ ಸತ್ಯ ಈಗ ಬಯಲಾಗಿದೆ.
ವಿಶ್ವ ತಂಬಾಕು ರಹಿತ ದಿನದ (ಮೇ 31) ಅಂಗವಾಗಿ ಬೆಂಗಳೂರಿನ ಪ್ರಸಿದ್ಧ ‘ಕಿಡ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ’ (Kidwai Hospital) ಈ ಆತಂಕಕಾರಿ ವರದಿಯನ್ನು ಬಿಡುಗಡೆ ಮಾಡಿದೆ.
ಯಾವೆಲ್ಲಾ ಕ್ಯಾನ್ಸರ್‌ಗಳಿಗೆ ತಂಬಾಕು ಕಾರಣ?
ವರದಿಯ ಪ್ರಕಾರ, ತಂಬಾಕು ಸೇವನೆಯಿಂದಾಗಿ ಪುರುಷರಲ್ಲಿ ಶ್ವಾಸಕೋಶ, ಬಾಯಿ ಹಾಗೂ ನಾಲಿಗೆ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೆ, ಮಹಿಳೆಯರು ಶ್ವಾಸಕೋಶ, ಬಾಯಿ ಮತ್ತು ಅನ್ನನಾಳದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಕೇವಲ ಕ್ಯಾನ್ಸರ್ ಮಾತ್ರವಲ್ಲದೆ ಧೂಮಪಾನದ ಹಾನಿಕಾರಕ ಹೊಗೆಯಿಂದಾಗಿ ಹೃದಯ ರಕ್ತನಾಳದ ಕಾಯಿಲೆ, ಕಿಡ್ನಿ ಸಮಸ್ಯೆ, ಗಂಟಲು, ಹೊಟ್ಟೆ ಹಾಗೂ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಗಳು ಆವರಿಸಿಕೊಳ್ಳುತ್ತಿವೆ. ಜೊತೆಗೆ ಆಸ್ಟಿಯೋಪೊರೋಸಿಸ್, ಹಲ್ಲುಗಳ ದೌರ್ಬಲ್ಯ, ಅಂಧತ್ವ, ಉಬ್ಬಸ ಮತ್ತು ಪುರುಷರಲ್ಲಿ ವೀರ್ಯದ ಕೊರತೆಗೂ ಇದು ಕಾರಣವಾಗುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.








