ಬೆಂಗಳೂರು: ಸಂಶೋಧನೆ, ಅಧ್ಯಯನದ ಹೆಸರಿನಲ್ಲಿ ವನ್ಯ ಜೀವಿ ಅಭಯಾರಣ್ಯದಲ್ಲಿ ಕಾಳಿಂಗ ಸರ್ಪಕ್ಕೆ ಪೋಟೋ ಶೂಟ್ ಹೆಸರಿನಲ್ಲಿ ಕಾಟ ಕೊಟ್ಟಿದ್ದು ವೈರಲ್ ಆಗಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವಂತ ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆ ನಡೆಸಿ, ವರದಿಗೆ ಸೂಚಿಸಿದ್ದಾರೆ. ಈ ವರದಿಯನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇಂದು ಈ ಕುರಿತಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪತ್ರ ಬರೆದಿದ್ದಾರೆ. ಅದರಲ್ಲಿ ಜನ ಸಂಗ್ರಾಮ ಪರಿಷತ್ತು. ಶಿವಮೊಗ್ಗ ಜಿಲ್ಲಾಧ್ಯಕ್ಷ ಅಖಿಲೇಶ್ ಚಿಪ್ಸ್, ಪತ್ರಕರ್ತ ಉದಯ್ ಸಾಗರ್, ಕನಕಪುರ ತಾಲೂಕಿನ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಇ- ಮೇಲ್ ಮೂಲಕ ಈ ಕಚೇರಿಗೆ ಸಲ್ಲಿಸಿರುವ ಸ್ವಯಂವೇದ್ಯ ಮನವಿ/ದೂರಿನ ಪ್ರತಿಯನ್ನು ಲಗತ್ತಿಸಲಾಗಿದ್ದು, ಅದರಲ್ಲಿ ಅವರು, ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ (ARRS)ದ ಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸಿ, ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ, ತಲ್ಲೂರು ಗ್ರಾಮ ಸ.ನಂ.11 ಸೋಮೇಶ್ವರ ಅಭಯಾರಣ್ಯದ ಕೇಂದ್ರ ಭಾಗದಲ್ಲಿ ಆಗುಂಬೆಯ ಎ.ಆರ್.ಆರ್.ಎಸ್. ಸಂಸ್ಥೆಯವರು ಅಕ್ರಮವಾಗಿ ಜಮೀನು ಖರೀದಿಸಿರುವ ಕುರಿತಂತೆ ಮಾಹಿತಿ ನೀಡಿರುತ್ತಾರೆ ಎಂದಿದ್ದಾರೆ.
ಯಾವುದೇ ಸಂಶೋಧನೆಗೆ ನಿರ್ದಿಷ್ಟ ಸಮಯಕ್ಕೆ ಮಾತ್ರವೇ ಅನುಮತಿ ನೀಡಲಾಗುತ್ತದೆ ಆದರೆ ಇಲ್ಲಿ ವರ್ಷವಿಡೀ ಸಂಶೋಧನೆ ಹೆಸರಲ್ಲಿ ಛಾಯಾಗ್ರಹಣ ನಡೆಸುವ ಬಗ್ಗೆ ತಿಳಿಸಿದ್ದು ವನ್ಯಜೀವಿ ಕಾಳಿಂಗ ಸರ್ಪಗಳ ಸೆರೆ, ರಕ್ಷಣೆಯ ಹೆಸರಲ್ಲಿ ಆಗುತ್ತಿರುವ ಪರಿಶಿಷ್ಠ ರ ವನ್ಯಜೀವಿ ಶೋಷಣೆಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅರಣ್ಯ ಭೂಮಿ ಒತ್ತುವರಿ ಹಾಗೂ ಕಟ್ಟಡ ನಿರ್ಮಾಣ, ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯೊಳಗೆ ಪರಿಸರ ಸೂಕ್ಷ್ಮ ಪ್ರದೇಶದ ಭೂಮಿ ಖರೀದಿ ಮಾಡಿರುವ ಗಂಭೀರ ಅಕ್ರಮಗಳ ಬಗ್ಗೆ ಸರ್ಕಾರದ ಗಮನ ಸೆಳೆದು, ಕಾಳಿಂಗ ಸರ್ಪಗಳ ಆವಾಸಸ್ಥಳದಲ್ಲಿ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆಗಳು, ಹಾಗೂ ಅರಣ್ಯ ಮತ್ತು ವನ್ಯಜೀವಿ ಕಾಯಿದೆಗಳ ನೇರ ಉಲ್ಲಂಘನೆ ಕುರಿತಂತೆ ಉನ್ನತ ಮಟ್ಟದ ಪಾರದರ್ಶಕ ತನಿಖೆಗೆ ಮನವಿ ಮಾಡಿರುತ್ತಾರೆ.
ಈ ಮನವಿಗಳಲ್ಲಿರುವ ಎಲ್ಲ ಅಂಶಗಳನ್ನೂ ಗಣನೆಗೆ ತೆಗೆದುಕೊಂಡು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ನೇತೃತ್ವದ ತಂಡದಿಂದ ಪರಿಶೀಲನೆ ನಡೆಸಿ, ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಮತ್ತು ತಪ್ಪಿತಸ್ಥರ ವಿರುದ್ಧ ಕೈಗೊಳ್ಳಬಹುದಾದ ಕ್ರಮದ ಶಿಫಾರಸಿನೊಂದಿಗೆ ಸಮಗ್ರ ವರದಿಯನ್ನು ಕಡತದಲ್ಲಿ 10 ದಿನಗಳ ಒಳಗಾಗಿ ಸಲ್ಲಿಸಲು ಸೂಚಿಸಿದ್ದಾರೆ. ಈ ಮೂಲಕ ವನ್ಯ ಜೀವಿ ಅಭಯಾರಣ್ಯ ವ್ಯಾಪ್ತಿಯೊಳಗೆ ಪರಿಸರ ಸೂಕ್ಷ್ಮ ಪ್ರದೇಶದ ಭೂಮಿ ಖರೀದಿ ಮಾಡಿ, ಪೋಟೋ ಗ್ರಾಫಿ ಹೆಸರಿನಲ್ಲಿ ಕಾಳಿಂಗ ಸರ್ಪಕ್ಕೆ ಕಾಟಕೊಟ್ಟವರಿಗೆ ಸಚಿವರು ಶಾಕ್ ನೀಡಿದ್ದಾರೆ.
ಕೆಟ್ಟು ನಿಂತ ಮೈಕು, ಸೌಜನ್ಯ ಮೆರೆದ ಧ್ವನಿವರ್ಧಕವಿಲ್ಲದೇ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು
BREAKING: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗೆ ಆಯುಕ್ತರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ