ಶಿವಮೊಗ್ಗ : ಬಾಲ್ಯ ವಿವಾಹ ಮಾಡುವ ಕಲ್ಯಾಣ ಮಂದಿರ, ದೇವಸ್ಥಾನ, ಮದುವೆ ಮಾಡಿಸುವ ಪೂಜಾರಿಗಳು, ಆಮಂತ್ರಣ ಮುದ್ರಿಸುವ ಪ್ರಿಂಟರ್ ಸೇರಿದಂತೆ ಬಾಲ್ಯವಿವಾಹಕ್ಕೆ ಸಹಕರಿಸುವವರೆಲ್ಲರ ವಿರುದ್ದ ಪ್ರಕರಣ ದಾಖಲು ಮಾಡಬೇಕೆಂದು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಾಲ್ಯವಿಹಾಹ ತಡೆಗಟ್ಟಲು ಅನೇಕ ರೀತಿಯಲ್ಲಿ ಅರಿವು ಮೂಡಿಸಲಾಗುತ್ತಿದ್ದರೂ, ಬಾಲ್ಯವಿವಾಹಗಳು ನಡೆಯುತ್ತಲೇ ಇವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಸಮಿತಿಯವರು ಇಂತಹ ಮದುವೆಗೆ ಸಹಕರಿಸಿದವರೆಲ್ಲರ ವಿರುದ್ದ ಪ್ರಕರಣ ದಾಖಲಿಸಬೇಕೆಂದು ಸೂಚನೆ ನೀಡಿದರು.
‘ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ’ದ ತನಿಖೆಯನ್ನು ‘ಎನ್ಐಎ’ಗೆ ವಹಿಸಲು ತೀರ್ಮಾನ – ಸಿಎಂ ಬಸವರಾಜ ಬೊಮ್ಮಾಯಿ
ಬಾಲ್ಯವಿವಾಹವನ್ನು ತಗ್ಗಿಸಲು ಡಿಡಿಪಿಯು ಮತ್ತು ಡಿಡಿಪಿಐ ರವರು ಶಾಲಾ-ಕಾಲೇಜು ಮುಖ್ಯೋಪ್ಯಾಧ್ಯಾಯರನ್ನು ಕರೆಯಿಸಿ, ಮಕ್ಕಳ ಕಲ್ಯಾಣ ಸಮಿತಿ ಸಹಯೋಗದಲ್ಲಿ ಸಭೆ ನಡೆಸಿ, ಮಕ್ಕಳ ಕುರಿತು ಹೆಚ್ಚಿನ ನಿಗಾ ವಹಿಸುವ ಬಗ್ಗೆ ಹಾಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಕ್ರಮ ವಹಿಸಲು ಸೂಚಿಸಿದ ಅವರು ಪಿಯುಸಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ದತ್ತು ಕೇಂದ್ರಕ್ಕೆ ಅಗತ್ಯವಾದ ಸಿಬ್ಬಂದಿಯನ್ನು ಕೂಡಲೇ ನಿಯೋಜಿಸಲು ಕ್ರಮ ವಹಿಸಿ, ಆಗಸ್ಟ್ 15 ರೊಳಗೆ ಕೇಂದ್ರವನ್ನು ಆರಂಭಿಸಬೇಕು. ಬಾಲಕಿಯರ ಬಾಲ ಮಂದಿರದ ಸ್ಥಿತಿ ಉತ್ತಮವಾಗಿಲ್ಲ. ಸೂಕ್ತವಾದ ಕಟ್ಟಡವನ್ನು ಹುಡುಕಿ ಸುಧಾರಣೆಗೆ ಕ್ರಮ ವಹಿಸಬೇಕು. ವಿಶೇಷ ಪಾಲನಾ ಯೋಜನೆ, ಪೋಷಕತ್ವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು ಬಾಲನ್ಯಾಯ ಮಂಡಳಿ ಮುಂದೆ ಬಂದ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿ, ಪುನರ್ವಸತಿಗೆ ಒತ್ತು ನೀಡಬೇಕು. ಸ್ವಾಧಾರ ಗೃಹಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗಬೇಕು. ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ತ್ವರಿತ ವಿಲೇವಾರಿ ಮಾಡಿ ಸೂಕ್ತ ಪರಿಹಾರ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮಕ್ಕಳ ಸಹಾಯವಾಣಿ 1098 ಗೆ ಅಪರಾತ್ರಿ ವೇಳೆ ಅಥವಾ ಅತಿ ತುರ್ತು ಕರೆಗಳು ಬಂದಾಗ ಚೈಲ್ಡ್ಲೈನ್ ಅಧಿಕಾರಿಗಳು 112 ಗೆ ಕರೆ ಮಾಡಿ ಪೊಲೀಸರ ನೆರವು ಪಡೆದು ಕಾರ್ಯಪ್ರವೃತ್ತರಾಗಬೇಕು. ಹಾಗೂ ಮಕ್ಕಳ ಸಹಾಯವಾಣಿ ಸೇರಿದಂತೆ ಮಕ್ಕಳ ಹಕ್ಕುಗಳು ಮತ್ತು ಮಹಿಳೆಯರ ಸಂರಕ್ಷಣೆ ಕುರಿತಾದ ಎಲ್ಲಾ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಕುರಿತು ಹೆಚ್ಚಿನ ಅರಿವು, ಐಇಸಿ(ಮಾಹಿತಿ, ಶಿಕ್ಷಣ, ಸಂವಹನ) ಚಟುವಟಿಕೆಯನ್ನು ಹೆಚ್ಚಿಸಬೇಕೆಂದರು.
ಜಿ.ಪಂ. ಸಿಇಓ ಎಂ.ಎಲ್.ವೈಶಾಲಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ವಿಶೇಷವಾಗಿ ನಗರ ಭಾಗದಲ್ಲಿ ಕಡ್ಡಾಯವಾಗಿ ಗರ್ಭಿಣಿಯರ ತಾಯಿ ಕಾರ್ಡ್ ಮಾಡಿಸಬೇಕು. ಅಂಗನವಾಡಿ ಮತ್ತು ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆಗಾಗಿ ಆರ್ಬಿಎಸ್ಕೆ ತಂಡ ಇನ್ನೂ ಚುರುಕಾಗಬೇಕು. ಆರೋಗ್ಯ ತಪಾಸಣೆಯಲ್ಲಿ ನಾಲ್ಕು ‘ಡಿ’ ಗಳಾದ ಡಿಸ್ಆರ್ಡರ್, ಡಿಫಿಷಿಯನ್ಸಿ, ಡಿಸೆಬಿಲಿಟಿ ಮತ್ತು ಡಿಫೆಕ್ಟ್ಗಳನ್ನು ರೆಫರ್ ಮಾಡಿ ಸಮಸ್ಯೆ ಸರಿಹೋಗುವವರೆಗೆ ಅನುಪಾಲನೆ ಮಾಡಬೇಕು. ಆರೋಗ್ಯ ತಪಾಸಣೆ ಮತ್ತು ಲಸಿಕಾಕರಣಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು.
ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಗುರುತಿಸಿ ನಿಗದಿತ ಅವಧಿಯವರೆಗೆ ಎನ್ಆರ್ಸಿ(ನ್ಯುಟ್ರಿಷನ್ ರಿಹ್ಯಾಬಿಲಿಟೇಷನ್ ಸೆಂಟರ್) ಯಲ್ಲಿ ಇರಿಸಿ, ಸೂಕ್ತ ಚಿಕಿತ್ಸೆ ನೀಡಿ, ಪೋಷಕರಿಗೆ ಪೌಷ್ಟಿಕತೆ ಮತ್ತು ಆಹಾರ ಕ್ರಮದ ಕುರಿತು ತಿಳಿಸಬೇಕು ಎಂದು ತಿಳಿಸಿದರು.
Breaking news: ಮಾಸ್ಕೋದಲ್ಲಿ 15 ಅಂತಸ್ತಿನ ಕಟ್ಟಡದಲ್ಲಿ ಭಾರೀ ಬೆಂಕಿ ಅವಘಡ: 8 ಮಂದಿ ಸಾವು, ಹಲವರ ರಕ್ಷಣೆ
ಜಿಲ್ಲೆಯಲ್ಲಿ ಒಟ್ಟು 2458 ಅಂಗನವಾಡಿ ಕೇಂದ್ರಗಳಿದ್ದು, 237 ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸ್ವಂತ ಕಟ್ಟಡ ಹೊಂದಲು ಸಿಡಿಪಿಓ ಗಳು ಸೂಕ್ತ ಜಾಗ ಹುಡುಕಬೇಕು. ನಗರ ಭಾಗದಲ್ಲಿ ಜಾಗ ಸಿಗುವುದು ಸ್ವಲ್ವ ಕಷ್ಟವಾಗಿದ್ದು ಜಾಗಕ್ಕಾಗಿ ಆಯುಕ್ತರು ಮತ್ತು ಡಿಸಿ ಯವರ ಗಮನಕ್ಕೆ ತಂದು ಎಲ್ಲ ರೀತಿಯಲ್ಲಿ ಪ್ರಯತ್ನಿಸಬೇಕೆಂದರು.
ನಗರದ ಪುನರ್ವಸತಿ ಕೇಂದ್ರ ಮತ್ತು ಮಹಿಳಾ ನಿಲಯದಲ್ಲಿ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳಾ ನಿಲಯದಲ್ಲಿ ಮಾನಸಿಕವಾಗಿ ಬಳಲುತ್ತಿರುವ ಹೆಣ್ಣುಮಕ್ಕಳಿಗೆ ಮಾನಸಿಕ ತಜ್ಞರಿಂದ ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಟಾನ ಆಗಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗಣೇಶ್ ಘಟಕದ ಕಾರ್ಯಕ್ರಮಗಳು ಮತ್ತು ಯೋಜನೆಗಳ ವರದಿ ಸಲ್ಲಿಸಿದರು. ಮಹಿಳಾ ಕಲ್ಯಾಣ ಯೋಜನೆ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಗಂಗೂಬಾಯಿ ವರದಿ ನೀಡಿದರು. ಐಸಿಡಿಎಸ್ ಯೋಜನೆಗಳು ಮತ್ತು ಜಿಲ್ಲಾ ಮಟ್ಟದ ಸ್ವತಂತ್ರ ವಿಶೇಷ ಟಾಸ್ಕ್ಫೋರ್ಸ್ ಸಮಿತಿ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ ವಿವರಣೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಡಿಹೆಚ್ಓ ಡಾ. ರಾಜೇಶ್ ಸುರಗಿಹಳ್ಳಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಡಿಪಿಓ ಗಳು, ಇಓ ಗಳು ಹಾಜರಿದ್ದರು.