ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ಸಂಭ್ರಮ ಮನೆ ಮಾಡಿದ್ದು, ಸಹಸ್ರಾರು ಮಂದಿ ಸುಬ್ರಹ್ಮಣ್ಯನ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ.
ಕರ್ನಾಟಕದ ಪ್ರಸಿದ್ಧ ನಾಗಕ್ಷೇತ್ರ, ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ) ಪ್ರಯುಕ್ತ ಕ್ಷೇತ್ರದ ದೇವರಾ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯುತ್ತಿದೆ. ಇಂದು ಬೆಳಿಗ್ಗೆ 7.05ರ ವೃಶ್ಚಿಕ ಲಗ್ನದಲ್ಲಿ ದೇವರ ವಿಗ್ರಹಗಳ ಬ್ರಹ್ಮರಥಾರೋಹಣ ನಡೆಯಿತು. ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು. ಚಿಕ್ಕ ರಥೋತ್ಸವ ನೆರವೇರಿದ ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ. ಇಲ್ಲಿ ಈಶ್ವರ ಪುತ್ರ ಷಣ್ಮುಖ ದೇವರನ್ನು ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತದೆ.ನಾಗಾರಾಧನೆ ಇಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು, ನಾಗಾರಾಧನೆ ಇಲ್ಲಿ ಪ್ರಮುಖವಾಗಿದೆ. ಸರ್ಪದೋಷಕ್ಕೊಳಗಾದವರು ಇಲ್ಲಿ ಸರ್ಪ ಸಂಸ್ಕಾರ ಮಾಡಿ ತಮ್ಮ ದೋಷ ಕಳೆದು ಕೊಳ್ಳುವುದು ತಲೆತಲಾಂತರದಿಂದ ನಡೆದು ಬಂದಿದೆ.
ಇಲ್ಲಿನ ಸರ್ಪ ಸ೦ಸ್ಕಾರ ಬಹಳ ಶ್ರೇಷ್ಟ ಮತ್ತು ಪ್ರಸಿದ್ಢ. ಸರ್ಪ ದೋಷ ಇರುವವರು ಇಲ್ಲಿಗೆ ಬ೦ದು, ಸರ್ಪ ಸ೦ಸ್ಕಾರ ಮತ್ತು ನಾಗ ಪ್ರತಿಷ್ಟೆ ನೆರವೇರಿಸಿ ದೋಷ ಮುಕ್ತರಾಗುತ್ತಾರೆ. ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿ ಈ ಕಾರ್ಯಗಳನ್ನು ನೆರವೇರಿಸಿದ ವಿಖ್ಯಾತರಲ್ಲಿ ಸಚಿನ್ ತೆ೦ಡೂಲ್ಕರ್ ಮತ್ತು ಹೇಮಮಾಲಿನಿ ಸೇರಿದ್ದಾರೆ. ಇಲ್ಲಿಗೆ ಭೇಟಿ ಕೊಟ್ಟಲ್ಲಿ ಸಮೀಪದ “ಆದಿ ಸುಬ್ರಹ್ಮಣ್ಯ ಸ್ವಾಮಿ” ಯ ದೇವಾಲಯ ಮತ್ತು “ಕುಮಾರಧಾರ” ನದಿಗೆ ತಪ್ಪದೇ ಭೇಟಿ ಕೊಡಿ.
ಜಾತಕಗಳಲ್ಲಿನ ಸರ್ಪದೋಷ ಅಥವಾ ನಾಗದೋಷ, ಕಾಳಸರ್ಪದೋಷ ಇತ್ಯಾದಿ ದೋಷಗಳ ಕಾರಣದಿಂದ ಅನಾರೋಗ್ಯ, ತಡವಿವಾಹ, ವೈವಾಹಿಕ ಸುಖಭಂಗ, ಪುತ್ರಹೀನತೆ (ಗಂಡು ಸಂತಾನ ಇಲ್ಲದಿರುವುದು),ಸಂತಾನಹೀನತೆ (ಮಕ್ಕಳೇ ಆಗದಿರುವುದು,ಉದ್ಯೋಗದಲ್ಲಿ ಅಸಮಾಧಾನ,ಇತ್ಯಾದಿ ತೊಂದರೆಗಳನ್ನು ಅನುಭವಿಸುತ್ತಿರುವವರ ಈ ಮೇಲೆ ಹೇಳಲಾದ ದೋಷಗಳಿಗೆ ಪರಿಹಾರ ಮಾಡಿಸಲು ಕರ್ನಾಟಕದಲ್ಲಿರುವ ಅತ್ಯಂತ ಪವಿತ್ರವಾದ ನಾಗರೂಪದಲ್ಲಿರುವ ಸುಬ್ರಹ್ಮಣ್ಯಸ್ವಾಮಿಯ ದೇವಸ್ಥಾನವಿರುವ ಕ್ಷೇತ್ರ ಎಂದರೆ ಈ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ. ಈ ಕ್ಷೇತ್ರಕ್ಕೆ ಪ್ರಪಂಚದ ನಾನಾ ಮೂಲೆಗಳಿಂದ ಭಕ್ತರು ಬಂದು ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ, ಇತ್ಯಾದಿ ಸೇವೆ ಸಲ್ಲಿಸಿ ದೋಷಮುಕ್ತರಾಗಿ ಸುಖಜೀವನ ನಡೆಸುತ್ತಿದ್ದಾರೆ. ಕುಜದೋಷವಿರುವವರೂ ಸಹಾ ಇಲ್ಲಿ ಪರಿಹಾರ ಕಾಣುತ್ತಾರೆ. ಕಾರ್ತಿಕೇಯ, ಸುಬ್ರಹ್ಮಣ್ಯ ಎಂದೆಲ್ಲಾ ಕರೆಸಿಕೊಳ್ಳುವ ಈ ದೇವನು ಕ್ಷೀರಪ್ರಿಯನು. ಭಕ್ತರ ದೋಷಗಳನ್ನು ಪರಿಹಾರ ಮಾಡುವ ಸಲುವಾಗಿಯೇ ಈ ಕ್ಷೇತ್ರದಲ್ಲಿ ನೆಲೆಸಿದ್ದಾನೆ ಎಂದರೆ ತಪ್ಪಾಗಲಾರದು.