ಮುಂಬೈ: ವಾರದ ಕೊನೆಯ ದಿನವಾದ ಇಂದು ಭಾರತೀಯ ಷೇರು ಮಾರುಕಟ್ಟೆ ಭಾರಿ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 900ಕ್ಕೂ ಹೆಚ್ಚು ಅಂಕ ಕುಸಿದರೆ, ನಿಫ್ಟಿ 23,000 ಮಟ್ಟಕ್ಕೆ ಜಾರಿದೆ. ಈ ಹಠಾತ್ ಮಾರಾಟದ ಅಬ್ಬರಕ್ಕೆ ಹೂಡಿಕೆದಾರರು ಕೇವಲ ಒಂದು ದಿನದಲ್ಲಿ ಸುಮಾರು 6 ಲಕ್ಷ ಕೋಟಿ ರೂಪಾಯಿ ಸಂಪತ್ತನ್ನು ಕಳೆದುಕೊಂಡಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ವಾತಾವರಣವು ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ. ಹಾರ್ಮುಜ್ ಜಲಸಂಧಿಯ ಪೂರೈಕೆ ವ್ಯತ್ಯಯದ ಸುದ್ದಿಗಳು ಹೂಡಿಕೆದಾರರಲ್ಲಿ ಭೀತಿ ಹುಟ್ಟಿಸಿವೆ.ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ $110 ದಾಟಿರುವುದು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇದು ಹಣದುಬ್ಬರದ ಆತಂಕವನ್ನು ಹೆಚ್ಚಿಸಿದೆ.
ಅಮೆರಿಕದ ಡಾಲರ್ ದಿನೇ ದಿನೇ ಬಲಗೊಳ್ಳುತ್ತಿದ್ದು, ಭಾರತೀಯ ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿದೆ. ಇದು ವಿದೇಶಿ ಹೂಡಿಕೆದಾರರು (FII) ಭಾರತೀಯ ಮಾರುಕಟ್ಟೆಯಿಂದ ಹಣ ಹಿಂಪಡೆಯಲು ಕಾರಣವಾಗಿದೆ.
ಜಾಗತಿಕ ಅನಿಶ್ಚಿತತೆಯಿಂದಾಗಿ ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳನ್ನು ಮಾರಾಟ ಮಾಡಿ ಹೊರಬರುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಸಾವಿರಾರು ಕೋಟಿ ಮೌಲ್ಯದ ಷೇರುಗಳು ಮಾರಾಟವಾಗಿವೆ.ಮಾರುಕಟ್ಟೆಯ ದಿಗ್ಗಜ ಷೇರುಗಳಾದ ಎಚ್ಡಿಎಫ್ಸಿ ಬ್ಯಾಂಕ್, ರಿಲಯನ್ಸ್ ಮತ್ತು ಪ್ರಮುಖ ಐಟಿ ಕಂಪನಿಗಳ ಷೇರುಗಳು ಭಾರಿ ನಷ್ಟ ಅನುಭವಿಸಿದ್ದು, ಸೂಚ್ಯಂಕದ ಕುಸಿತಕ್ಕೆ ಪ್ರಮುಖ ಕೊಡುಗೆ ನೀಡಿವೆ.








