ಮುಂಬೈ : ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಭದ್ರತಾ ಏಜೆನ್ಸಿಗಳು ಹೈ ಅಲರ್ಟ್ ವ್ಯವಸ್ಥೆ ಮಾಡಲಾಗಿದೆ.
ಇಂಡಿಗೋ ಏರ್ಲೈನ್ಸ್ಗೆ ಶನಿವಾರ(ನಿನ್ನೆ) ರಾತ್ರಿ ಬಾಂಬ್ ಬೆದರಿಕೆ ಎಚ್ಚರಿಕೆ ಬಂದಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವೊಂದರಲ್ಲಿ ಬಾಂಬ್ ಇದೆ ಎಂದು ಇಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು. ಆದರೆ ವಿಮಾನದ ತಪಾಸಣೆಯ ಸಮಯದಲ್ಲಿ, ಏನೂ ಕಂಡುಬಂದಿಲ್ಲ ಎನ್ನಲಾಗುತ್ತಿದೆ.
ಮುಂಬೈನಿಂದ ಅಹಮದಾಬಾದ್ಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಸಂಖ್ಯೆ 6E 6045 ರಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಇಮೇಲ್ ಎಚ್ಚರಿಕೆ ನೀಡಿತ್ತು. ಬಾಂಬ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದರಿಂದ ವಿಮಾನ ತಡವಾಯಿತು. ಬಳಿಕ ಇದು ವಂಚನೆ ಎಂದು ತಿಳಿದು ಬಂದಿದೆ.
ಮುಂಬೈ ಪೊಲೀಸರು ಪ್ರಸ್ತುತ ಇಮೇಲ್ನ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಭದ್ರತಾ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ.
ಸೆಪ್ಟೆಂಬರ್ 30 ರಂದು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರ ನಡುವೆ ಹೊಡೆದಾಟದ ನಂತರ ಸುಳ್ಳು ಬಾಂಬ್ ಅಲಾರಂನಿಂದ ಮಲೇಷ್ಯಾಕ್ಕೆ ಹೋಗುವ ವಿಮಾನ ವಿಳಂಬವಾಗಿತ್ತು.