ಶಿವಮೊಗ್ಗ : ನಗರದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಯ ವೇಳೆಯಲ್ಲಿ ಮಸೀದಿಯ ಮುಂದೆಯೇ ಕೇಸರಿ ಧ್ವಜ ಹಾರಾಡಿದೆ. ಗಾಂಧಿ ಬಜಾರ್ ನಲ್ಲಿರುವಂತ ಜಾಮೀಯಾ ಮಸೀದಿಯ ಮುಂದೆ ಕೇಸರಿ ಧ್ವಜ ಹಾರಾಡಿದ್ದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣದಿಂದ ಕೂಡಿದೆ.
ನಗರದಲ್ಲಿ ಇಂದು ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಯಲ್ಲಿ ಈ ಭಾರಿ ಹೆಚ್ಚಿನ ಸಂಖ್ಯೆಯ ಜನ ಸೇರಿದ್ದಾರೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದಾರೆ. ಮೆರವಣಿಗೆಯ ಹಾದಿ ಉದ್ದಕ್ಕೂ ಮಹಿಳೆಯರು ಭಜನೆ, ನೃತ್ಯ ಮಾಡುತ್ತ ಗಮನ ಸೆಳೆಯುತ್ತಿದ್ದಾರೆ.
ಮೆರವಣಿಗೆಯುದ್ಧಕ್ಕೂ ಕೇಸರಿ ಶಾಲು ಧರಿಸಿದ ಜನರು, ಕೇಸರಿ ಧ್ವಜಗಳ ಹಾರಾಟ ಕಂಡು ಬಂದಿದೆ. ಜೊತೆಗೆ ಜೈ ಶ್ರೀರಾಮ್ ಘೋಷಣೆ ಎಲ್ಲೆಲ್ಲೂ ಮೆರವಣಿಗೆಯುದ್ಧಕ್ಕೂ ಮೊಳಗಿದೆ.
ಮೆರವಣಿಗೆ ಗಾಂಧಿ ಬಜಾರ್ ಬಳಿಯ ಜಾಮಿಯಾ ಮಸೀದಿ ಬಳಿಗೆ ಬರುತ್ತಿದ್ದಂತೇ, ಮಸೀದಿಯ ಮುಂದೆ ಕೇಸರಿ ಧ್ವಜ ಹಾರಾಟ ಜೋರಾಗಿತ್ತು. ಬಿಗಿ ಪೊಲೀಸ್ ಬಂಧೋಬಸ್ತ್ ನಡುವೆಯೂ ಮಸೀದಿಯ ಎದುರೇ ಕೇಸರಿ ಧ್ವಜ ಹಾರಾಡಿದ್ದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇದಲ್ಲದೇ ಕೇಸರಿ ಧ್ವಜವನ್ನು ಹಾರಾಡಿಸುತ್ತಾ, ಜೈ ಶ್ರೀರಾಮ್ ಹಾಗೂ ಹತ್ಯೆಗೀಡಾದಂತ ಹಿಂದೂ ಕಾರ್ಯಕರ್ತ ಹರ್ಷ ಪರ ಘೋಷಣೆಗಳನ್ನು ಮೊಳಗಿದ್ದರಿಂದ ಮತ್ತಷ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂಧೋಬಸ್ತ್ ನಿಯೋಜಿಸಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.