ಕೈವ್: ಉಕ್ರೇನ್ ಮೇಲೆ ರಷ್ಯಾ ತನ್ನ ವಾಯು ದಾಳಿಯನ್ನು ತೀವ್ರಗೊಳಿಸಿದ್ದು, ಕಳೆದ ರಾತ್ರಿ ನಡೆಸಿದ ಭೀಕರ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾ ಸೇನೆಯು ಸುಮಾರು 700 ಡ್ರೋನ್‌ಗಳು ಮತ್ತು ಹತ್ತಾರು ಬ್ಯಾಲಿಸ್ಟಿಕ್ ಹಾಗೂ ಕ್ರೂಸ್ ಕ್ಷಿಪಣಿಗಳನ್ನು ಬಳಸಿ ಉಕ್ರೇನ್‌ನ ವಿವಿಧ ನಗರಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದೆ. ಇದು ಕಳೆದ ಎರಡು ವಾರಗಳಲ್ಲಿ ನಡೆದ ಅತ್ಯಂತ ದೊಡ್ಡ ಪ್ರಮಾಣದ ವೈಮಾನಿಕ ದಾಳಿ ಎಂದು ಹೇಳಲಾಗಿದೆ.
ರಾಜಧಾನಿ ಕೈವ್‌ನಲ್ಲಿ 12 ವರ್ಷದ ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಇಲ್ಲಿನ ವಸತಿ ಸಮುಚ್ಚಯಗಳ ಮೇಲೆ ಕ್ಷಿಪಣಿಗಳು ಬಿದ್ದ ಪರಿಣಾಮವಾಗಿ ಕಟ್ಟಡಗಳು ಧಶಾಯಿಯಾಗಿದ್ದು, ಭಾರಿ ಬೆಂಕಿ ಕಾಣಿಸಿಕೊಂಡಿದೆ.
ಬಂದರು ನಗರಿ ಒಡೆಸ್ಸಾದಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸಿದ್ದು, ಕನಿಷ್ಠ 9 ಜನರು ಬಲಿಯಾಗಿದ್ದಾರೆ. ಇಲ್ಲಿನ ಎತ್ತರದ ವಸತಿ ಕಟ್ಟಡವೊಂದು ದಾಳಿಗೆ ತುತ್ತಾಗಿದೆ.ಡ್ನಿಪ್ರೊ ಪ್ರಾಂತ್ಯದಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಈ ಭೀಕರ ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀವ್ರವಾಗಿ ಖಂಡಿಸಿದ್ದಾರೆ. “ಇಂತಹ ನಾಗರಿಕ ಹತ್ಯೆಗಳನ್ನು ಸಾಮಾನ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ರಷ್ಯಾದ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚಾಗಬೇಕು ಮತ್ತು ಉಕ್ರೇನ್‌ಗೆ ವಾಯು ರಕ್ಷಣಾ ವ್ಯವಸ್ಥೆಗಳ ನೆರವು ತುರ್ತಾಗಿ ಸಿಗಬೇಕು” ಎಂದು ಅವರು ಜಾಗತಿಕ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ಮತ್ತೊಂದೆಡೆ, ಉಕ್ರೇನ್ ತನ್ನ ತೈಲ ಸಂಸ್ಕರಣಾಗಾರಗಳ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.








