ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ರಣಭೂಮಿಯಲ್ಲಿ ದಾಳಿ-ಪ್ರತಿದಾಳಿಗಳು ಮತ್ತಷ್ಟು ತೀವ್ರಗೊಂಡಿವೆ. ಉಕ್ರೇನ್‌ನ ನಾಗರಿಕ ವಸತಿ ಪ್ರದೇಶಗಳನ್ನು ಗುರಿಯಾಗಿಸಿ ರಷ್ಯಾ ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ 14 ಮಂದಿ ತೀವ್ರವಾಗಿ ಗಾಯಗೊಂಡಿದ್ದರೆ, ಪ್ರತಿಯಾಗಿ ಉಕ್ರೇನ್ ನಡೆಸಿದ ಶೆಲ್ ದಾಳಿಗೆ ರಷ್ಯಾ ನಿಯಂತ್ರಣದಲ್ಲಿರುವ ಖೆರ್ಸನ್ (Kherson) ಪ್ರಾಂತ್ಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಗಳಲ್ಲಿ ರಷ್ಯಾ ಸೇನೆಯು ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ಹತ್ತಾರು ಡ್ರೋನ್‌ಗಳನ್ನು ಹಾರಿಸಿದೆ.ಉಕ್ರೇನ್‌ನ ಈಶಾನ್ಯ ಭಾಗದಲ್ಲಿರುವ ಜನನಿಬಿಡ ಪ್ರದೇಶಗಳ ಮೇಲೆ ನಡೆದ ಈ ದಾಳಿಯಿಂದಾಗಿ ಹಲವು ಕಟ್ಟಡಗಳು ಹಾನಿಗೊಳಗಾಗಿವೆ. ಸ್ಫೋಟದ ತೀವ್ರತೆಗೆ ಮಕ್ಕಳು ಸೇರಿದಂತೆ ಒಟ್ಟು 14 ನಾಗರಿಕರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಡ್ರೋನ್ ದಾಳಿಯು ವಿದ್ಯುತ್ ಗ್ರಿಡ್‌ಗಳ ಮೇಲೆ ಪರಿಣಾಮ ಬೀರಿದ್ದು, ಹಲವು ಗ್ರಾಮಗಳು ಕತ್ತಲಲ್ಲಿ ಮುಳುಗಿವೆ.ತನ್ನ ಮೇಲೆ ನಡೆಯುತ್ತಿರುವ ದಾಳಿಗೆ ಉಕ್ರೇನ್ ಕೂಡ ಅಷ್ಟೇ ಬಲವಾಗಿ ಪ್ರತಿಕ್ರಿಯಿಸುತ್ತಿದೆ.
ರಷ್ಯಾ ಪಡೆಗಳ ವಶದಲ್ಲಿರುವ ದಕ್ಷಿಣ ಉಕ್ರೇನ್‌ನ ಖೆರ್ಸನ್ ಪ್ರಾಂತ್ಯದ ಮೇಲೆ ಉಕ್ರೇನ್ ಸೇನೆ ಕ್ಷಿಪಣಿ ಮತ್ತು ಶೆಲ್ ದಾಳಿ ನಡೆಸಿದೆ.ರಷ್ಯಾ ಬೆಂಬಲಿತ ಸ್ಥಳೀಯ ಅಧಿಕಾರಿಗಳ ಪ್ರಕಾರ, ಈ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವು ಮೂಲಸೌಕರ್ಯಗಳು ಧ್ವಂಸಗೊಂಡಿವೆ.








