ಮಾಸ್ಕೋ: ಎರಡನೇ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧ ಸೋವಿಯತ್ ಒಕ್ಕೂಟ ಸಾಧಿಸಿದ ಐತಿಹಾಸಿಕ ಜಯದ 81ನೇ ವಾರ್ಷಿಕೋತ್ಸವದ (Victory Day) ಅಂಗವಾಗಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಎರಡು ದಿನಗಳ ಕಾಲ ಕದನ ವಿರಾಮ ಘೋಷಿಸಿದ್ದಾರೆ.
ರಷ್ಯಾದ ರಕ್ಷಣಾ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಮೇ 8 ಮತ್ತು ಮೇ 9, 2026 ರಂದು ರಷ್ಯಾ ಯಾವುದೇ ರೀತಿಯ ಮಿಲಿಟರಿ ಕಾರ್ಯಾಚರಣೆ ನಡೆಸುವುದಿಲ್ಲ. ರಷ್ಯಾದ ಅತ್ಯಂತ ಪ್ರಮುಖ ನಾಗರಿಕ ಹಬ್ಬವಾದ ‘ವಿಜಯ ದಿನ’ದ ಆಚರಣೆಗೆ ಗೌರವ ಸಲ್ಲಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ರಷ್ಯಾ ಉಕ್ರೇನ್‌ಗೆ ಕಠಿಣ ಎಚ್ಚರಿಕೆಯನ್ನೂ ನೀಡಿದೆ:ವಿಜಯೋತ್ಸವದ ಸಂಭ್ರಮಕ್ಕೆ ಅಥವಾ ಮಾಸ್ಕೋದ ರೆಡ್ ಸ್ಕ್ವೇರ್‌ನಲ್ಲಿ ನಡೆಯುವ ಪರೇಡ್‌ಗೆ ಅಡ್ಡಿಪಡಿಸಲು ಉಕ್ರೇನ್ ಪ್ರಯತ್ನಿಸಿದರೆ, ಉಕ್ರೇನ್ ರಾಜಧಾನಿ ಕೀವ್ (Kyiv) ಕೇಂದ್ರಭಾಗದ ಮೇಲೆ ಭೀಕರ ಕ್ಷಿಪಣಿ ದಾಳಿ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.
ಸಂಭವನೀಯ ದಾಳಿಯ ಹಿನ್ನೆಲೆಯಲ್ಲಿ ಕೀವ್‌ನಲ್ಲಿರುವ ನಾಗರಿಕರು ಮತ್ತು ವಿದೇಶಿ ರಾಜತಾಂತ್ರಿಕ ಸಿಬ್ಬಂದಿಗಳು ಕೂಡಲೇ ನಗರವನ್ನು ತೊರೆಯುವಂತೆ ರಷ್ಯಾ ಸೂಚನೆ ನೀಡಿದೆ.








