ಬೆಂಗಳೂರು: ರಾಜ್ಯ ಸರಕಾರವು ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರ ಸಬಲೀಕರಣ ಸಾಧಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಈ ವರ್ಷ 500 ಕೋಟಿ ರೂಪಾಯಿ ಘೋಷಿಸಲಾಗಿದೆ ಎಂದು ಜೀವನೋಪಾಯ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿರುವ ಹತ್ತು ದಿನಗಳ ‘ಅಸ್ಮಿತೆ’ ವ್ಯಾಪಾರ ಮತ್ತು ಪ್ರದರ್ಶನ ಮೇಳವನ್ನು ಅವರು ಗುರುವಾರ ಉದ್ಘಾಟಿಸಿ ಮಾತನಾಡಿ, ನ.10ರವರೆಗೆ ನಡೆಯಲಿರುವ ಈ ಮೇಳದಲ್ಲಿ ರಾಷ್ಟ್ರೀಯ ಗ್ರಾಮೀಣ ಮತ್ತು ನಗರ ಜೀವನೋಪಾಯ ಅಭಿಯಾನದ ಭಾಗವಾಗಿರುವ ಸ್ವಸಹಾಯ ಸಂಘಗಳ ಮಹಿಳೆಯರು ಮನೆಯಲ್ಲೇ ತಯಾರಿಸಿದ ಹಲವು ಉತ್ಪನ್ನಗಳ ಮಾರಾಟ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಸಬಲೀಕರಣಕ್ಕೆ ಅಪಾರ ಮಹತ್ವ ನೀಡುತ್ತಿದ್ದಾರೆ. ಹೀಗಾಗಿ ಸ್ವಸಹಾಯ ಸಂಘಗಳಿಗೆ ಕೇಂದ್ರ ಸರ್ಕಾರವು ಶೇ.60ರಷ್ಟು ಹಣ ನೀಡುತ್ತಿದೆ. ಉಳಿದ ಶೇ.40ರಷ್ಟು ಹಣವನ್ನು ಮಾತ್ರ ರಾಜ್ಯ ಸರ್ಕಾರ ಕೊಡುತ್ತಿದೆ ಎಂದು ಅವರು ತಿಳಿಸಿದರು.
ಈ ಸ್ವಸಹಾಯ ಸಂಘಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಅಮೆಜಾನ್, ಫ್ಲಿಪ್ಕಾರ್ಟ್ ತರಹದ ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಪೈಕಿ ಅಮೆಜಾನ್ ಕಂಪನಿಯು 75 ಸಾವಿರ ಕೋಟಿ ರೂಪಾಯಿ ಮೌಲ್ಯದ ಮಾರುಕಟ್ಟೆ ಒದಗಿಸುವ ಭರವಸೆ ನೀಡಿದೆ ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಅಭಿಯಾನದ ನಿರ್ದೇಶಕಿ ಆರ್.ರಾಗಪ್ರಿಯಾ ಉಪಸ್ಥಿತರಿದ್ದರು.
ಜೀವನೋಪಾಯ ಇಲಾಖೆಯ ವತಿಯಿಂದ ಏರ್ಪಡಿಸಿರುವ ಅಸ್ಮಿತೆ ಪ್ರದರ್ಶನ ಮತ್ತು ವ್ಯಾಪಾರ ಮೇಳವನ್ನು ಜೀವನೋಪಾಯ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಗುರುವಾರ ಉದ್ಘಾಟಿಸಿದರು. ಜತೆಯಲ್ಲಿ ಎಸ್.ಸೆಲ್ವಕುಮಾರ್, ನಿರ್ದೇಶಕಿ ಆರ್.ರಾಗಪ್ರಿಯಾ ಇದ್ದರು.