ನವದೆಹಲಿ: ಒಬ್ಬ ವ್ಯಕ್ತಿಯ ಗೌಪ್ಯತೆಯ ಹಕ್ಕು, ತನ್ನ ಜೈವಿಕ ತಂದೆಯನ್ನು ಹುಡುಕುವ ಮಗುವಿನ ಜೀವಮಾನದ ಹಕ್ಕನ್ನು ಮೀರಿಸಲು ಸಾಧ್ಯವೇ? ಈ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪಿತೃತ್ವವನ್ನು ಸಾಬೀತುಪಡಿಸಲು ಬೇರೆ ಯಾವುದೇ ದೃಢವಾದ ಸಾಕ್ಷ್ಯಗಳು ಲಭ್ಯವಿಲ್ಲದಿದ್ದಾಗ, ನ್ಯಾಯಾಲಯಗಳು ವೈಯಕ್ತಿಕ ಗೌಪ್ಯತೆ ಮತ್ತು ಮಗುವಿನ ಸತ್ಯಶೋಧನೆಯ ಹಕ್ಕಿನ ನಡುವೆ ಸಮತೋಲನ ಸಾಧಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟಿಸ್ವರ್ ಸಿಂಗ್ ಅವರಿದ್ದ ನ್ಯಾಯಪೀಠವು, ಡಿಎನ್ಎ ಪರೀಕ್ಷೆಯನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. 1999ರಲ್ಲಿ ಜನಿಸಿದ ವ್ಯಕ್ತಿಯೊಬ್ಬರು ತನ್ನ ತಂದೆ ಯಾರು ಎಂದು ತಿಳಿಯಲು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ, ಆರೋಪಿ ವ್ಯಕ್ತಿ ಡಿಎನ್ಎ ಪರೀಕ್ಷೆಗೆ ಒಳಗಾಗಬೇಕು ಎಂದು ಕೋರ್ಟ್ ಆದೇಶಿಸಿದೆ.
“ಆರೋಪಿಯ ಗೌಪ್ಯತೆಯ ಹಕ್ಕು ಒಂದೆಡೆಯಾದರೆ, ತನ್ನ ಜೀವನದುದ್ದಕ್ಕೂ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕೆಂಬ ಅರ್ಜಿದಾರರ ಹಂಬಲ ಮತ್ತೊಂದೆಡೆಯಲ್ಲಿದೆ. ಈ ಎರಡೂ ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ,” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ತನ್ನ ತಾಯಿ ಪದೇ ಪದೆ ಇವರೇ ನನ್ನ ತಂದೆ ಎಂದು ಹೇಳುತ್ತಾ ಬಂದಿದ್ದರೂ, ಅಧಿಕೃತ ದಾಖಲೆಗಳು ವಿರುದ್ಧವಾಗಿವೆ. ಈ ಪ್ರಕರಣದಲ್ಲಿ ಪಿತೃತ್ವದ ಪ್ರಶ್ನೆಯೇ ಮುಖ್ಯವಾಗಿದೆ. ಡಿಎನ್ಎ ಪರೀಕ್ಷೆಯ ಹೊರತಾಗಿ ಸತ್ಯವನ್ನು ತಿಳಿಯಲು ಬೇರೆ ದಾರಿಯಿಲ್ಲದ ಕಾರಣ, ಪರೀಕ್ಷೆ ಅನಿವಾರ್ಯವಾಗಿದೆ ಎಂದು ಕೋರ್ಟ್ ತಿಳಿಸಿದೆ.
ಡಿಎನ್ಎ ಪರೀಕ್ಷೆಯನ್ನು ದಿನನಿತ್ಯದ ಆಧಾರದ ಮೇಲೆ ಆದೇಶಿಸುವಂತಿಲ್ಲ. ಸಾಂಪ್ರದಾಯಿಕ ಸಾಕ್ಷ್ಯಗಳಿಂದ ವಿವಾದವನ್ನು ಬಗೆಹರಿಸಲು ಸಾಧ್ಯವಾಗದ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಇಂತಹ ಪರೀಕ್ಷೆಗೆ ಆದೇಶಿಸಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಅಪರ್ಣಾ ಅಜಿಂಕ್ಯ ಫಿರೋಡಿಯಾ (2024) ಮತ್ತು ಇವಾನ್ ರತ್ನಂ (2025) ಪ್ರಕರಣಗಳಲ್ಲಿ ನೀಡಲಾದ ಮಾರ್ಗಸೂಚಿಗಳನ್ನು ನ್ಯಾಯಾಲಯ ಉಲ್ಲೇಖಿಸಿದೆ. ಮಗುವಿನ ಜೈವಿಕ ಮೂಲವನ್ನು ತಿಳಿಯುವ ನ್ಯಾಯಯುತ ಆಸಕ್ತಿ ಮತ್ತು ವ್ಯಕ್ತಿಯ ಘನತೆ, ಗೌಪ್ಯತೆಯ ನಡುವಿನ ಸಮತೋಲನವನ್ನು ಪರಾಮರ್ಶಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ ಎಂದು ಪುನರುಚ್ಚರಿಸಿದೆ.








