ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ಮತ್ತು ಮೂಲಸೌಕರ್ಯ ಹಾನಿಯ ಕುರಿತು ನಡೆಯುತ್ತಿರುವ ಸಮೀಕ್ಷೆಯ ವರದಿ ಶೀಘ್ರ ಸಲ್ಲಿಕೆಯಾಗಲಿದೆ. ಹೆಚ್ಚಿನ ಪರಿಹಾರ ಕೋರಿ ಕೇಂದ್ರಕ್ಕೆ ಮನವಿಯನ್ನು 2-3 ದಿನಗಳಲ್ಲಿ ಸಲ್ಲಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿ, ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾಗಿರುವ ಹಾನಿಗೆ ಕೇಂದ್ರದಿಂದ ಪರಿಹಾರ ಕೇಳುತ್ತೀರಾ ಎಂಬ ಪ್ರಶ್ನೆಗೆ ಸಿಎಂ ಉತ್ತರಿಸಿದರು.
ಇತ್ತೀಚೆಗೆ ರಾಜ್ಯದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ಮೂಲ ಸೌಕರ್ಯಗಳು ಹಾಳಾಗಿವೆ. ತುರ್ತು ಕೆಲಸಕ್ಕಾಗಿ ರಾಜ್ಯ ಸರ್ಕಾರ ೫೦೦ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಬೆಳೆ ಹಾನಿಯಾಗಿದೆ. ಅದರ ಸಮೀಕ್ಷೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಈದ್ಗಾ ಮೈದಾನ: ಕಾನೂನಿನ ಪ್ರಕಾರ ಸಭೆ ಸಮಾರಂಭ ಆಯೋಜನೆ
ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದೆ. ಸರ್ಕಾರದ ನೀತಿ ನಿಯಮಗಳ ಪ್ರಕಾರ ಸಭೆ ಸಮಾರಂಭಗಳು, ಉತ್ಸವಗಳನ್ನು ಕಾನೂನಿನ ಪ್ರಕಾರ ಕೈಗೊಳ್ಳಲಾಗುವುದು ಎಂದರು. ಯಾರೂ ಏನೇ ಹೇಳಿದರೂ ನಮಗೆ ಕಾನೂನು ಮುಖ್ಯ. ಕಾನೂನು ಬಿಟ್ಟು ಏನೂ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.