ಬೆಂಗಳೂರು : ರಾಜ್ಯ ಅಪೆಕ್ಸ್ ಸಹಕಾರಿ ಬ್ಯಾಂಕ್ಗೆ 233 ಕೋಟಿ ರು. ವಂಚನೆ ಮಾಡಿರುವ ಪ್ರಕರಣದ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅವರ ಮಾಲಿಕತ್ವದ ಸಕ್ಕರೆ ಕಂಪನಿಯ ಅಧಿಕಾರಿಗಳಿಗೆ ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಪೊಲೀಸರಿಂದ ಬಂಧನ ಭೀತಿ ಎದುರಾಗಿದೆ.
ಮಾಜಿ ಸಚಿವರ ವಿರುದ್ದ ದಾಖಲಾಗಿದ್ದ ವಂಚನೆ ಪ್ರಕರಣದ ಎಫ್ಐಆರ್ಗೆ ತಕ್ಷಣವೇ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೆ ತನಿಖೆ ಚುರುಕುಗೊಳಿಸಲು ಸಿಐಡಿ ಮುಂದಾಗಿದೆ. ಮೊದಲ ಹಂತದಲ್ಲಿ ಆರೋಪಿಗಳ ವಿಚಾರಣೆಗೆ ಸಿಐಡಿ ನೋಟಿಸ್ ನೀಡಲಿದ್ದು, ಇದಕ್ಕೆ ಆರೋಪಿಗಳ ಪ್ರತಿಕ್ರಿಯೆ ಬಳಿಕ ಕಠಿಣ ಕ್ರಮಕ್ಕೆ ನಿರ್ಧರಿಸಿದೆ ಎನ್ನಲಾಗಿದೆ. ಈ ವಂಚನೆ ಸಂಬಂಧ ಬೆಂಗಳೂರಿನ ವಿವಿ ಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿತ್ತು.
ರಾಜ್ಯ ಅಪೇಕ್ಸ್ ಬ್ಯಾಂಕ್ ಅಲ್ಲಿ 2013 ರಿಂದ 2017ರವರೆಗೆ ರಮೇಶ್ ಜಾರಕಿಹೊಳಿ ಸಾಲವನ್ನು ಪಡೆದಿದ್ದರು.ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಲ್ಲಿ ಸೌಭಾಗ್ಯಲಕ್ಷ್ಮೀ ಶುಗರ್ಸ್ ಕಂಪನಿ ಸ್ಥಾಪಿಸಲು 233 ಕೋಟಿ ರು. ಸಾಲವನ್ನು ಪಡೆದಿದ್ದರು. ಆದರೆ ಪಡೆದ ಸಾಲವನ್ನು ಮರುಪಾವತಿ ಮಾಡದೆ ಬಡ್ಡಿ ಬೆಳೆದು ಒಟ್ಟು 439 ಕೋಟಿ ರುಪಾಯಿಗೆ ಸಾಲದ ಮೊತ್ತ ಬೆಳೆದಿದೆ.ಜಾರಕಿಹೊಳಿ ಹಾಗೂ ಕಂಪನಿಯ ನಿರ್ದೇಶಕರ ವಿರುದ್ಧ ಅಪೇಕ್ಸ್ ಬ್ಯಾಂಕ್ ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಿ FIR ದಾಖಲಿಸಿದೆ.