ಮೈಸೂರು: ನನ್ನನ್ನು ಪಕ್ಷದಿಂದ ಬಿಡಿಸಲು ಕಿರುಕುಳ ನೀಡುತ್ತಿದ್ದಾರೆ ಎಂದು ಶಾಸಕ ಎಸ್ ಎ ರಾಮದಾಸ್ ಪರೋಕ್ಷ ಅರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಬಸ್ ಶೆಲ್ಟರ್ ವಿವಾದ ವಿಚಾರ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ದಯಮಾಡಿ ಬಿಟ್ಟು ಬಿಡಿ ಕೈ ಮುಗಿದು ಕೇಳಿದರು. ನಾನು ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆ ಎಂದು ಹೇಳಿದರು.
ಬಿಜೆಪಿಯ 11 ಜನ ಶಾಸಕರು ಇದ್ದರು. ಕಿರುಕುಳ ನೀಡಿ 10 ಜನ ಬೇರೆ ಪಕ್ಷಕ್ಕೆ ಹೊರಟು ಹೋದರು. ಉಳಿದಿರುವವನು ನಾನೊಬ್ಬನೇ. ದಯಮಾಡಿ ನನ್ನನ್ನು ಬಿಟ್ಟು ಬಿಡಿ ಏನೂ ಪ್ರಶ್ನೆ ಕೇಳಬೇಡಿ ಎಂದು ಮಾಧ್ಯಮ ಮಿತ್ರರ ಮುಂದೆ ಶಾಸಕರು ಕೈ ಮುಗಿದು ಬೇಡಿಕೊಂಡರು.
ನಾನು ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ಮಾಡುತ್ತೇನೆ. ಪಾರ್ಕ್, ಸ್ಮಶಾನ ಅಭಿವೃದ್ಧಿ ನನ್ನ ಕನಸು. ಸಾಯುವ ಮುನ್ನ ಸಾಧನೆ ಮಾಡಬೇಕು ಅನ್ನೋದೇ ನನ್ನ ಗುರಿ. ಈ ಬಗ್ಗೆ ಸಿಎಂ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಸಮಿತಿ ರಚಿಸಲು ಮನವಿ ಮಾಡಿದ್ದೇನೆ. ಸಮಿತಿ ಯಾವುದೇ ವರದಿ ಕೊಟ್ಟರೂ ಅದಕ್ಕೆ ನಾನು ಬದ್ಧ ಎಂದು ಗದ್ಗದಿತರಾದರು.