ಕೆಎನ್ಎನ್ಡಿಜಿಟಲ್ ಡೆಸ್ಕ್ : ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನಲೆ, ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದಅ. 2ರವರೆಗೂ ಗುಡುಗು ಸಹಿತ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಕುರಿತು ಮಾಹಿತಿ ನೀಡಿದ ಹವಾಮಾನ ವಿಜ್ಞಾನಿ ಸದಾನಂದ ಅಡಿಗ, ಬಂಗಾಳಕೊಲ್ಲಿಯ ವಾಯುವ್ಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ (ಅಪ್ಪರ್ ಏರ್ ಸೈಕ್ಲೋನ್ ಸರ್ಕ್ಯುಲೇಷನ್) ಇರುವುದರಿಂದ ಕರ್ನಾಟಕದ ಪೂರ್ವ ಭಾಗಕ್ಕೆ, ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಐದಾರು ದಿನ ಒಳನಾಡಿನ ಹೆಚ್ಚಿನ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದರು.
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದಾದ್ಯಂತ ಇಂದು ಮತ್ತು ನಾಳೆ ಕೆಲವು ಜಿಲ್ಲೆಗಳಲ್ಲಿ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 13.5 ಮಿಮೀ ಮಳೆಯಾಗಿದೆ. ಇಂದು ಮತ್ತು ನಾಳೆಯೂ ಒಂದೆರಡು ಬಾರಿ ಗುಡುಗು ಸಹಿತ ಮಳೆಯಾಗಲಿದೆ ಎಂದರು.
ಕಳೆದ 24 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಮುಂಗಾರು ದುರ್ಬಲವಾಗಿತ್ತು. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.
ಅತಿಹೆಚ್ಚು ಅಂದರೆ, ತಿಕ್ಕೋಟ (ವಿಜಯಪುರ ಜಿಲ್ಲೆ), ಮುಧೋಳೆ (ಕಲಬುರ್ಗಿ ಜಿಲ್ಲೆ), ಅಣ್ಣಿಗೆರೆ (ಧಾರವಾಡ ಜಿಲ್ಲೆ)ಯಲ್ಲಿ ತಲಾ 6 ಸೆಂ.ಮೀ, ಹುಲ್ಸೂರು ಬೀದರ್ ಜಿಲ್ಲೆಯಲ್ಲಿ 5ಸೆಂಮೀ, ರಾಜೇಶ್ವರ್ ಬೀದರ್ ಜಿಲ್ಲೆಯಲ್ಲಿ 4 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ 1 ಸೆಂ.ಮೀ ಮಳೆಯಾದ ವರದಿಯಾಗಿದೆ.
ಗುಡುಗು ಮುನ್ಸೂಚನೆ
ಮುಂದಿನ 24 ಘಂಟೆಗಳಲ್ಲಿ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ್, ಕಲಬುರ್ಗಿ, ಕೊಪ್ಪಲ್, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆ, ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಮುಂದಿನ 48 ಘಂಟೆಗಳಲ್ಲಿ ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ಕೋಲಾರ, ತುಮಕೂರಿನ ಒಂದೆರಡು ಕಡೆಗಳಲ್ಲಿ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಬೆಂಗಳೂರಲ್ಲೂ ಸಾಧಾರಣ ಮಳೆ ಮುನ್ಸೂಚನೆ
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಒಂದೆರಡು ಬಾರಿ ಹಗುರದಿಂದ ಸಾದಾರಣ ಮಳೆ ಅಥವಾ ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ.
ಮುಂದಿನ 48 ಗಂಟೆಗಳು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಒಂದೆರಡು ಬಾರಿ ಹಗುರದಿಂದ ಸಾದಾರಣ ಮಳೆ, ಅಥವಾ ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕೂಡಾ, ಕ್ರಮವಾಗಿ 28 ಮತ್ತು 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.