ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದಲ್ಲಿ ಬೇಸಿಗೆ ಮಳೆ ಅಬ್ಬರಿಸುತ್ತಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ತೀವ್ರವಾಗಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು, ಮೈಸೂರು ಸುತ್ತಮುತ್ತಲಿನ ಜಿಲ್ಲೆಗಳು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ 4 ದಿನ ಮತ್ತು ಕರಾವಳಿ ಭಾಗದಲ್ಲಿ ಮುಂದಿನ 2 ದಿನ ಬಿರುಸಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಧಾರವಾಡ, ಗದಗ ಮತ್ತು ಹಾವೇರಿಯಲ್ಲಿ ಮೇ 19ರಿಂದ ಮೇ 21ರವರೆಗೆ ಗುಡುಗು, ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಲಿದೆ. ಕರಾವಳಿ ತೀರದಲ್ಲಿ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸೂರು ಗ್ರಾಮದ ಬಳಿ ಇರುವ ಯಕ್ಷಂಡಿ ಸೇತುವೆಯು ಮಳೆಯ ಭೋರ್ಗರೆತಕ್ಕೆ ಕೊಚ್ಚಿ ಹೋಗಿದೆ. ಜಿಲ್ಲೆಯಾದ್ಯಂತ ರಸ್ತೆಗಳ ಮೇಲೆ ಮರಗಳು ಮತ್ತು ಗೋಡೆಗಳು ಕುಸಿದಿವೆ. 50ಕ್ಕೂ ಹೆಚ್ಚು ಮನೆಗಳ ಗೋಡೆಗಳು ಧರಾಶಾಹಿಯಾಗಿದ್ದು, 100ಕ್ಕೂ ಅಧಿಕ ವಿದ್ಯುತ್ ಕಂಬಗಳು ಉರುಳಿವೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕಡಚರ್ಲಾ ಬಳಿಯ ಪಿಲ್ಗುಂಟಾ ತಾಂಡಾದಲ್ಲಿ ಸಿಡಿಲು ಬಡಿದು 25 ಮೇಕೆಗಳು ಸಾವನ್ನಪ್ಪಿವೆ. ಸ್ಥಳಕ್ಕೆ ಭೇಟಿ ನೀಡಿದ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಪಶುಸಂಗೋಪನೆ ಇಲಾಖೆಯಿಂದ ಪ್ರತಿ ಮೇಕೆಗೆ 7,500 ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಮಳೆಯ ಅಬ್ಬರಕ್ಕೆ ಮತ್ತೆ ಮೂವರು ಬಲಿ
ಗದಗ, ಲಕ್ಷ್ಮೇಶ್ವರ ಹಾಗೂ ಹೊನ್ನಾಳಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಗದಗ ಹೊರವಲಯದ ಒಕ್ಕಲಗೇರಿ ಓಣಿಯ ನಿವಾಸಿ, ಕುರಿಗಾಹಿ ಮರೇತಮ್ಮಪ್ಪ (52) ಎಂಬುವವರು ಮನೆಯ ಹೊರಗೆ ಮಲಗಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಗಾಳಿ-ಮಳೆಗೆ ಹೆದ್ದಾರಿಯ ವಿದ್ಯುತ್ ಕಂಬವೊಂದು ಮುರಿದು ಬಿದ್ದ ಪರಿಣಾಮ, ಕುರಿಗಾಯಿ ಮಂಜಪ್ಪ (26) ಎಂಬ ಯುವಕ ಮೃತಪಟ್ಟಿದ್ದಾನೆ.ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಲೆಕಣಬೂರು ಗ್ರಾಮದ ಸರ್ಕಾರಿ ಶಾಲೆಯ ಹೆಡ್ ಮಾಸ್ಟರ್ ನಾಗರಾಜಪ್ಪ (45) ಎಂಬುವವರು ಮನೆಯ ಮುಂದೆ ನಿಂತು ಮಳೆ ವೀಕ್ಷಿಸುತ್ತಿದ್ದಾಗ, ಸಿಡಿಲಿನ ಭೀಕರ ಶಬ್ದಕ್ಕೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.








