ವಾಷಿಂಗ್ಟನ್: ಜಾಗತಿಕವಾಗಿ ತೀವ್ರ ಆತಂಕ ಮೂಡಿಸಿದ್ದ ಇರಾನ್ ಮತ್ತು ಅಮೆರಿಕ ನಡುವಿನ ಸಂಭವನೀಯ ಯುದ್ಧದ ಭೀತಿ ಸದ್ಯಕ್ಕೆ ತಿಳಿಯಾಗಿದೆ. ಇರಾನ್ ಮೇಲೆ ನಡೆಸಲು ಸಂಪೂರ್ಣವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದ್ದ ‘ಪೂರ್ವ ನಿಯೋಜಿತ’ (Planned) ವಾಯುದಾಳಿಯನ್ನು ಅಮೆರಿಕ ಕೊನೆ ಕ್ಷಣದಲ್ಲಿ ಹಿಂಪಡೆದಿದೆ ಎಂದು ಡೊನಾಲ್ಡ್ ಟ್ರಂಪ್ ಅತ್ಯಂತ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಗಲ್ಫ್ ದೇಶಗಳ (Gulf Leaders) ಪ್ರಮುಖ ನಾಯಕರು ನಡೆಸಿದ ಸಂಧಾನ ಮತ್ತು ವಿಶೇಷ ಮನವಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ನಿರ್ಧಾರದಿಂದಾಗಿ ಮಧ್ಯಪ್ರಾಚ್ಯದಲ್ಲಿ ಸಂಭವಿಸಬಹುದಾಗಿದ್ದ ಒಂದು ದೊಡ್ಡ ರಕ್ತಪಾತ ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟು ಸದ್ಯಕ್ಕೆ ತಪ್ಪಿದಂತಾಗಿದೆ.
ಇರಾನ್‌ನ ಇಂಧನ ಮತ್ತು ರಕ್ಷಣಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಅಮೆರಿಕದ ಸೇನೆ ಸಂಪೂರ್ಣ ಸಜ್ಜಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಸೌದಿ ಅರೇಬಿಯಾ, ಯುಎಇ ಸೇರಿದಂತೆ ಪ್ರಮುಖ ಗಲ್ಫ್ ಒಕ್ಕೂಟದ ನಾಯಕರು ಅಮೆರಿಕದೊಂದಿಗೆ ಮಾತುಕತೆ ನಡೆಸಿ, ಯುದ್ಧದ ಭೀಕರ ಪರಿಣಾಮಗಳ ಕುರಿತು ಎಚ್ಚರಿಸಿದ್ದರಿಂದ ದಾಳಿಯನ್ನು ಸ್ಥಗಿತಗೊಳಿಸಲಾಯಿತು.
ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ನಡೆದರೆ ಅದರ ನೇರ ಪರಿಣಾಮ ಗಲ್ಫ್ ದೇಶಗಳ ಭದ್ರತೆ ಮತ್ತು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಬೀರುತ್ತದೆ. ಹೀಗಾಗಿ ಈ ಬಿಕ್ಕಟ್ಟನ್ನು ರಾಜತಾಂತ್ರಿಕವಾಗಿ ಬಗೆಹರಿಸಿಕೊಳ್ಳುವಂತೆ ಮುಸ್ಲಿಂ ರಾಷ್ಟ್ರಗಳ ನಾಯಕರು ಅಮೆರಿಕದ ಮೇಲೆ ಒತ್ತಡ ಹೇರಿದ್ದರು.
ಇರಾನ್ ಮೇಲಿನ ದಾಳಿಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದ್ದರೂ, ಅದರ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಲು ಅಮೆರಿಕ ತೀರ್ಮಾನಿಸಿದೆ. ಯಾವುದೇ ಪ್ರಚೋದನೆ ಎದುರಾದರೂ ತಕ್ಕ ಉತ್ತರ ನೀಡಲು ಅಮೆರಿಕ ಸೇನೆ ಸನ್ನದ್ಧವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.








