ಚಾಮರಾಜನಗರ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸಲಿರುವ ಹಿನ್ನೆಲೆಯಲ್ಲಿ ಖಾಕಿ ಹೈ ಅಲರ್ಟ್ ಆಗಿದ್ದು, ಬಿಗಿ ಪೊಲೀಸ್ ಪಹರೆ ನಿಯೋಜಿಸಲಾಗಿದೆ.
30 ಸಾವಿರಕ್ಕೂ ಹೆಚ್ಚು ಮಂದಿ ರಾಹುಲ್ ಗಾಂಧಿ ಜೊತೆ ಇಂದು ಹೆಜ್ಜೆ ಹಾಕುವ ನಿರೀಕ್ಷೆ ಇದೆ. ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಮೂವರು ಎಸ್ಪಿ, ಎಂಟು ಜನ ಡಿವೈಎಸ್ಪಿ, 25 ಇನ್ಸ್ಪೆಕ್ಟರ್, 50 ಜನ ಸಬ್ ಇನ್ಸ್ಪೆಕ್ಟರ್, ಒಂದು ಸಾವಿರಕ್ಕೂ ಅಧಿಕ ಕಾನ್ಸ್ಟೇಬಲ್, ಕೆಎಸ್ಆರ್ಪಿ, 10ಕ್ಕೂ ಅಧಿಕ ಡಿಆರ್ ಸಿಬ್ಬಂದಿ ನಿಯೋಜಿಸಲಾಗಿದೆ. ಕಾನೂನುಬಾಹಿರ ಕೃತ್ಯಕ್ಕೆ ಯಾರೇ ಮುಂದಾದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ವೇದಿಕೆ ಮೇಲೆ 240 ಮಂದಿ: ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಬೃಹತ್ ಸಭೆ ನಡೆಯಲಿದ್ದು, ವೇದಿಕೆ ಮೇಲೆ 240 ಮಂದಿ ಆಸೀನರಾಗಲಿದ್ದಾರೆ. ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕುವ ಪಾದಯಾತ್ರಿಗಳು, ರಾಜ್ಯ ಮಟ್ಟದ ನಾಯಕರುಗಳು ವೇದಿಕೆಯಲ್ಲಿ ಇರಲಿದ್ದು ರಾಜ್ಯದ ಎಲ್ಲಾ ನಾಯಕರುಗಳು ಹೆಜ್ಜೆ ಹಾಕಲಿದ್ದಾರೆ ಎಂದರು.
ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಡಿಗೆ ಆರಂಭಿಸಲಿರುವ ರಾಹುಲ್ ಗಾಂಧಿ, ಗುಂಡ್ಲುಪೇಟೆ ಪಟ್ಟಣದ ಹೊರ ವಲಯದಲ್ಲಿನ ಕೆಬ್ಬೆಕಟ್ಟೆ ಶನೇಶ್ವರ ದೇವಾಲಯದ ಬಳಿ ಸೋಲಿಗರು, ಆಮ್ಲಜನಕ ದುರಂತದಲ್ಲಿ ಮಡಿದ ಸಂತ್ರಸ್ತರ ಜೊತೆ ಸಂವಾದ ನಡೆಸಲಿದ್ದಾರೆ.