ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.ಈವರೆಗೆ ಸುಮಾರು 52 ಜನರನ್ನು ಬಂಧಿಸಲಾಗಿದೆ.
ಅಕ್ರಮಕ್ಕೆ ಸಂಬಂಧಿಸಿದಂತೆ ಮೊದಲ ರ್ಯಾಂಕ್ ಪಡೆದಿದ್ದ ಅಭ್ಯರ್ಥಿ ಸುಪ್ರಿಯಾ ಹುಂಡೇಕರ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಳಿಸರುವ ಸಿಐಡಿ ತಂಡವು, ಇನ್ನೊಬ್ಬ ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದು, ಹುಡುಕಾಟ ನಡೆಸುತ್ತಿದೆ. ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕು ಹಿಪ್ಪರಗಾ ಗ್ರಾಮದ ನಿವಾಸಿ ಸುಪ್ರಿಯಾ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿರುವ ಆರೋಪ ಎದುರಿಸುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಅವರು ಮೊದಲ ರ್ಯಾಂಕ್ ಪಡೆದಿದ್ದರು. ಸುಪ್ರಿಯಾ ವಿಚಾರಣೆ ಬಳಿಕ ಅಕ್ರಮವಾಗಿ ಪರೀಕ್ಷೆ ಬರೆದಿರುವ ಮತ್ತಷ್ಟು ಜನರ ಮಾಹಿತಿ ಲಭ್ಯವಾಗಬಹುದು ಎಂದು ಸಿಐಡಿ ಅಧಿಕಾರಿಗಳು ನಿರೀಕ್ಷಿಸಿದ್ದಾರೆ.